ಸ್ವಾತ್‌ನಲ್ಲಿ ತಾಲಿಬಾನಿ ಉಗ್ರರಿಂದ ನಾಲ್ವರು ಸೇನಾಕಮಾಂಡೊಗಳ ಹತ್ಯೆಗೆ ಸೇನೆಯ ಉನ್ನತಾಧಿಕಾರಿ ಸಯ್ಯದ್ ಮುಹಮ್ಮದ್ ಜಾವೇದ್ ಕುಮ್ಮಕ್ಕು ನೀಡಿದ್ದಾರೆಂಬ ಆರೋಪ ಕುರಿತು ಪ್ರಧಾನಮಂತ್ರಿ ಯುಸುಫ್ ರಾಜಾ ಗಿಲಾನಿ ತನಿಖೆಗೆ ಆದೇಶಿಸಿದ್ದಾರೆ. ಮಲಕಾಂಡ್ ವಿಭಾಗದ ಆಯುಕ್ತರಾಗಿದ್ದ ಜಾವೇದ್ ತಾಲಿಬಾನ್ ಉಗ್ರರ ಬಗ್ಗೆ ಮೆದುಧೋರಣೆ ಹೊಂದಿದ ಆರೋಪದ ಮೇಲೆ ಕಳೆದ ತಿಂಗಳು ಹುದ್ದೆಯಿಂದ ತೆಗೆಯಲಾಗಿತ್ತು.
ಸ್ವಾತ್ ಕಣಿವೆಯಿಂದ ಬುನೇರ್ ಮತ್ತು ದಿರ್ ಜಿಲ್ಲೆಗಳಿಗೆ ತಾಲಿಬಾನ್ ಉಗ್ರರ ಹರಡುವಿಕೆ ತಪ್ಪಿಸಲು ಜಾವೇದ್ ವಿಫಲರಾಗಿದ್ದಾರೆಂದು ಅಧಿಕಾರಿಗಳು ಆರೋಪಿಸಿದ್ದಾರೆ. ಉಗ್ರಗಾಮಿಗಳು ಸೆರೆಹಿಡಿದ ವಿಶೇಷ ಸೇವಾ ಗುಂಪಿನ ಕಮಾಂಡೊಗಳನ್ನು ಬಿಡಿಸಲು ಒತ್ತಡಹೇರದೇ ಜಾವೇದ್ ವಿಫಲರಾಗಿದ್ದಾರೆಂದು ಕೂಡ ಆರೋಪಿಸಲಾಗಿತ್ತು.
ನಾಲ್ವರು ಕಮಾಂಡೊಗಳನ್ನು ಉಗ್ರಗಾಮಿಗಳು ಗುಂಡಿಕ್ಕಿದ ಬಳಿಕ ಅವರ ರುಂಡಗಳನ್ನು ಉಗ್ರರು ಕತ್ತರಿಸಿದ್ದರು. ಪತ್ರಕರ್ತರ ಜತೆ ಇತ್ತೀಚಿನ ಸಂವಾದದಲ್ಲಿ, ನಾಲ್ವರು ಎಸ್‌ಎಸ್‌ಜಿ ಕಮಾಂಡೊಗಳ ರುಂಡಚ್ಛೇದದಲ್ಲಿ ಮಲಕಾಂಡ್ ಆಯುಕ್ತರು ವಹಿಸಿದ ಪಾತ್ರದ ಬಗ್ಗೆ ವರದಿಗಳು ತಮ್ಮ ಗಮನಸೆಳೆದಿರುವುದಾಗಿ ಗಿಲಾನಿ ಹೇಳಿದ್ದು, ಈ ಕುರಿತು ತನಿಖೆಯನ್ನು ಉನ್ನತ ಮಟ್ಟದಲ್ಲಿ ಕೈಗೊಳ್ಳುವುದಾಗಿ ಹೇಳಿದ್ದಾರೆ. |