ಎಲ್‌ಟಿಟಿಇ ಜತೆ ಸಮರದ ಕೊನೆಯ ಮೂರು ವರ್ಷಗಳಲ್ಲಿ ಸುಮಾರು 6200 ಭದ್ರತಾ ಸಿಬ್ಬಂದಿ ಹತರಾಗಿದ್ದಾರೆ ಮತ್ತು ಬಹುತೇಕ 30,000 ಮಂದಿ ಗಾಯಗೊಂಡಿದ್ದಾರೆಂಬ ಆಘಾತಕಾರಿ ವಿಷಯವನ್ನು ಶ್ರೀಲಂಕಾ ಬಹಿರಂಗಮಾಡಿದೆ. ರಾಷ್ಟ್ರಸ್ವಾಮ್ಯದ ಟಿವಿಯಲ್ಲಿ ರಕ್ಷಣಾ ಕಾರ್ಯದರ್ಶಿ ಗೊಟಾಬಾಯ ರಾಜಪಕ್ಷ ಈ ಅಂಕಿಅಂಶಗಳನ್ನು ಅಧಿಕೃತ ಹೇಳಿಕೆಯಲ್ಲಿ ಬಿಡುಗಡೆ ಮಾಡಿದ್ದಾರೆ.
ಕಳೆದ 26 ವರ್ಷಗಳಿಂದ ಎಲ್‌ಟಿಟಿಇ ಮತ್ತು ಶ್ರೀಲಂಕಾ ಸರ್ಕಾರದ ನಡುವೆ ಯುದ್ಧದಲ್ಲಿ ಕನಿಷ್ಠ 80,000 ಜನರು ಹತರಾಗಿದ್ದಾರೆಂದು ಹೇಳಲಾಗಿದೆ. ಏತನ್ಮಧ್ಯೆ, ಸಮರದಿಂದ ಸಂತ್ರಸ್ತರಾದ 2,75,000 ಜನರ ಸಂಕಷ್ಟದ ಬಗ್ಗೆ ಚರ್ಚಿಸಲು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್ ಶುಕ್ರವಾರ ಶ್ರೀಲಂಕಾಗೆ ಆಗಮಿಸಲಿದ್ದಾರೆ.ಅಧ್ಯಕ್ಷ ಮಹೀಂದ್ರ ರಾಜಪಕ್ಷ ಅವರ ಸೋದರರಾದ ರಾಜಪಕ್ಷಾ ಅಂತಿಮ ಹಂತದ ಸೇನಾ ಕಾರ್ಯಾಚರಣೆ ಆಗಸ್ಟ್ 2006ರಲ್ಲಿ ಆರಂಭವಾಯಿತೆಂದು ತಿಳಿಸಿದರು.
ಆಗಿನಿಂದ ಭದ್ರತಾ ಸಿಬ್ಬಂದಿ, ಸೇನೆ, ನೌಕಾದಳ, ವಾಯುದಳ, ಪೊಲೀಸರು, ನಾಗರಿಕ ರಕ್ಷಣಾಪಡೆ ಸೇರಿದಂತೆ 6261 ಸಿಬ್ಬಂದಿ ಸತ್ತಿದ್ದು, 29,551 ಸಿಬ್ಬಂದಿ ಗಾಯಗೊಂಡಿದ್ದಾರೆಂದು ರಾಜಪಕ್ಷ ತಿಳಿಸಿದರು.ಎಲ್‌ಟಿಟಿಇ ಉಗ್ರರು ಎಷ್ಟು ಮಂದಿ ಸತ್ತಿದ್ದಾರೆಂದು ಅಧಿಕೃತ ಅಂಕಿಅಂಶಗಳು ಇಲ್ಲದಿದ್ದರೂ, 15,000 ದಿಂದ 22,000 ಉಗ್ರರು ಹತರಾಗಿರಬಹುದೆಂದು ಅಂದಾಜು ಮಾಡಲಾಗಿದೆ. ಜನವರಿಯಲ್ಲಿ ಮಾತ್ರವೇ 7000 ನಾಗರಿಕರು ಸತ್ತಿದ್ದಾರೆಂದು ವಿಶ್ವಸಂಸ್ಥೆ ಹೇಳುತ್ತಿದ್ದು, ಸರ್ಕಾರ ಆ ಅಂಕಿಅಂಶವನ್ನು ನಿರಾಕರಿಸಿದೆ. ಸಮರದಿಂದ ಸಂತ್ರಸ್ತರಾದವರಿಗೆ ಪುನರ್ವಸತಿ ಕಲ್ಪಿಸುವ ಕಡೆ ಈಗ ಗಮನಹರಿಸಲಾಗಿದೆ. ಬಾನ್ ಕಿ ಮೂನ್ ಭೇಟಿಯಲ್ಲಿ ಕೂಡ ಶ್ರೀಲಂಕಾ ತಮಿಳುನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸುವ ವಿಷಯ ಪ್ರಧಾನವಾಗಿ ಚರ್ಚೆಯಾಗಲಿದೆ.
ಬಾನ್ ಅವರು ವಾಯುನಿಯದ ಮಾನಿಕ್ ಫಾರಂಗೆ ತೆರಳಿ ಅಲ್ಲಿ ಬೀಡುಬಿಟ್ಟಿರುವ ಬಹುತೇಕ ಸಂತ್ರಸ್ತರನ್ನು ಭೇಟಿ ಮಾಡಲಿದ್ದಾರೆ.ಅವರು ತಮ್ಮ ಪ್ರತಿನಿಧಿ ವಿಜಯ್ ನಂಬಿಯಾರ್ ಅವರನ್ನು ಮುಂಚಿತವಾಗಿ ಕಳಿಸಿದ್ದು, ರಾಜಕೀಯ ಸಂಧಾನದ ಅಗತ್ಯವಿರುವುದಾಗಿ ನಂಬಿಯಾರ್ ಶುಕ್ರವಾರ ತಿಳಿಸಿದ್ದಾರೆ. ಸಂಧಾನ ಪ್ರಕ್ರಿಯೆಯಿಂದ ತಮಿಳರ ಕಾನೂನುಬದ್ಧ ಆಶೋತ್ತರಗಳನ್ನು ಈಡೇರಿಸಲು ಸಾಧ್ಯವಾಗುತ್ತದೆಂದು ಅವರು ಹೇಳಿದ್ದಾರೆ. |