ಭಾರತ ಮತ್ತು ಆಫ್ಘಾನಿಸ್ತಾನದಲ್ಲಿ ತೊಂದರೆ ಸೃಷ್ಟಿಸುವುದು ಐಎಸ್‌ಐನ ವ್ಯೂಹಾತ್ಮಕ ನಿಲುವು ಎಂದು ಅಮೆರಿಕದ ಮಿಲಿಟರಿಯ ಉನ್ನತಾಧಿಕಾರಿ ತಿಳಿಸಿದ್ದು, ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆ ತನ್ನ ದೃಷ್ಟಿಕೋನ ಬದಲಿಸಿಕೊಂಡು ತಾಲಿಬಾನ್ ಜತೆ ಸಖ್ಯವನ್ನು ಸ್ಥಗಿತಗೊಳಿಸಬೇಕು ಎಂದು ಹೇಳಿದ್ದಾರೆ.
ಪಾಕಿಸ್ತಾನವು ಐಎಸ್‌ಐಯನ್ನು ಸೃಷ್ಟಿಸಿದ್ದು, ಭಾರತದಲ್ಲಿ, ಆಫ್ಘಾನಿಸ್ತಾನದಲ್ಲಿ ಅರಾಜಕತೆ ಸೃಷ್ಟಿಸುವುದು ಅದರ ವ್ಯೂಹಾತ್ಮಕ ನಿಲುವಾಗಿದೆ ಎಂದು ಜಂಟಿ ಸಿಬ್ಬಂದಿ ಮುಖ್ಯಸ್ಥರ ಅಧ್ಯಕ್ಷ ಅಡ್ಮೈರಲ್ ಮೈಕ್ ಮುಲ್ಲನ್ ತಿಳಿಸಿದರು. ಸೆನೆಟ್ ವಿದೇಶಾಂಗ ಸಂಬಂಧ ಸಮಿತಿಯ ಮುಂದೆ ಪ್ರಶ್ನೆಗೆ ಉತ್ತರಿಸುತ್ತಾ ಮುಲ್ಲೆನ್ ಮೇಲಿನಂತೆ ಹೇಳಿದರು.ಪಾಕಿಸ್ತಾನದ ನಾಯಕರ ಜತೆ ಮಾತುಕತೆಯಲ್ಲಿ ಐಎಸ್‌ಐ ಮತ್ತು ತಾಲಿಬಾನ್ ಜತೆ ಸಖ್ಯದ ಬಗ್ಗೆ ತಾವು ಕಳವಳ ವ್ಯಕ್ತಪಡಿಸಿದ್ದಾಗಿ ಅವರು ನುಡಿದರು.
ಪಾಕ್ ನಾಗರಿಕ ಮತ್ತು ಮಿಲಿಟರಿ ನಾಯಕತ್ವದ ಜತೆ ಸುದೀರ್ಘ ಚರ್ಚೆಯನ್ನು ತಾವು ನಡೆಸಿದ್ದು, ಸುದೀರ್ಘಾವೆಧಿಯಲ್ಲಿ ಪ್ರಗತಿ ಸಾಧನೆಗೆ ಐಎಸ್‌ಐ ತನ್ನ ಆಯಕಟ್ಟಿನ ನಿಲುವನ್ನು ಬದಲಿಸಿಕೊಳ್ಳುವಂತೆ ಹೇಳಿದ್ದಾಗಿ ಸೆನೆಟರ್ ರಸ್ ಫೈನ್‌ಗೋಲ್ಡ್ ಅವರ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಅವರು ನುಡಿದರು. |