ಎಲ್‌ಟಿಟಿಇ ವಿರುದ್ಧ ಸಮರದಲ್ಲಿ ವಿಜಯ ಸಾಧಿಸಿದ ಬಳಿಕ ನಿರಾಳವಾಗಿರುವ ಶ್ರೀಲಂಕಾ ಅಧ್ಯಕ್ಷ ಮಹೀಂದ್ರ ರಾಜಪಕ್ಷೆ, ವ್ಯಾಘ್ರ ನಾಯಕ ಪ್ರಭಾಕರನ್ ಜೀವಂತವಾಗಿ ಸೆರೆಸಿಗಬೇಕೆಂದು ತಾವು ಬಯಸಿದ್ದಾಗಿ ಹೇಳಿದ್ದಾರೆ. ಜೀವಂತವಾಗಿ ಸೆರೆಸಿಕ್ಕಿದ್ದರೆ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆಗೆ ಸಂಬಂಧಪಟ್ಟಂತೆ ಭಾರತದಲ್ಲಿ ವಿಚಾರಣೆ ಎದುರಿಸಲು ಸಾಧ್ಯವಾಗುತ್ತಿತ್ತು ಎಂದು ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.
ಅವನು ಸಜೀವವಾಗಿ ಸೆರೆಸಿಕ್ಕಿದ್ದರೆ ಭಾರತದ ತಲೆನೋವಾಗುತ್ತಿದ್ದ ಎಂದು ಶ್ರೀಲಂಕಾ ಅಧ್ಯಕ್ಷರು ಹಾಸ್ಯಮಯ ಧಾಟಿಯಲ್ಲಿ ಹೇಳಿದರು. ಎಲ್‌ಟಿಟಿಇ ವಿರುದ್ಧ ಸಮರದಲ್ಲಿ ಗೆದ್ದ ಬಳಿಕ ನಿಮ್ಮ ಭಾವನೆಯೇನು ಎಂಬ ಪ್ರಶ್ನೆಗೆ ತಾವು ನಿರಾಳವಾಗಿದ್ದಾಗಿ ತಿಳಿಸಿದರು. 30 ವರ್ಷಗಳ ಬಳಿಕ ನಾವು ಭಯೋತ್ಪಾದಕರನ್ನು ತೆರವು ಮಾಡಿದ್ದು, ನಾವೀಗ ಏಕತೆಯ ಪೂರ್ಣ ರಾಷ್ಟ್ರ ಎಂದು ಉದ್ಗರಿಸಿದ್ದಾರೆ.
ತಾವು ಪಡೆಗಳನ್ನು ಒಂದುಗೂಡಿಸಿ ನಮ್ಮ ಕಮಾಂಡೊಗಳಿಗೆ ಕಾಳಗದಲ್ಲಿ ಹೋರಾಟಕ್ಕೆ ಅವಕಾಶ ನೀಡಿ, ಬೆಂಬಲ ನೀಡಿದ್ದು ತಮ್ಮ ಯಶಸ್ಸಿನ ರಹಸ್ಯ ಎಂದು ರಾಜಪಕ್ಷೆ ಹೇಳಿದರು.ಯುದ್ಧಪೀಡಿತ ರಾಷ್ಟ್ರದ ಪುನರ್ನಿರ್ಮಾಣಕ್ಕೆ ಭಾರತದ ನೆರವನ್ನು ಕೋರಿದ ಅವರು, ಅದು ನಮ್ಮ ಪಕ್ಕದ ನೆರೆಯ ರಾಷ್ಟ್ರವಾಗಿದ್ದು, ಹಾಗೆ ಮಾಡಬೇಕಾದ ಕರ್ತವ್ಯ ಅದರದ್ದು ಎಂದು ನುಡಿದರು. |