ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಮತ್ತು ಸಾಮಗ್ರಿಗಳಿಂದ ಭಾರತದ ವಿರುದ್ಧ ಸಾಂಪ್ರದಾಯಿಕ ಯುದ್ಧ ನಡೆಸಲು ಪಾಕಿಸ್ತಾನ ತನ್ನ ಸೇನೆಯನ್ನು ಸಜ್ಜುಗೊಳಿಸಿತ್ತು ಎಂದು ಪೆಂಟಗಾನ್ ದಾಖಲೆಗಳು ಬಹಿರಂಗಮಾಡಿವೆ.
ಭಯೋತ್ಪಾದನೆ ವಿರುದ್ಧ ಹೋರಾಟ ಮಾಡಲು ಅಮೆರಿಕ ನೀಡುತ್ತಿದ್ದ ಮಿಲಿಟರಿ ನೆರವನ್ನು ತನ್ನ ಸೇನೆಯ ಬಲವರ್ಧನೆಗೆ ಪಾಕಿಸ್ತಾನ ಗಣನೀಯ ಮೊತ್ತವನ್ನು ಬಳಸಿಕೊಂಡಿದೆಯೆಂದು ಪೆಂಟಗಾನ್ ತಿಳಿಸಿದೆ. ಆಗಿನ ಬುಷ್ ಆಡಳಿತದ ಸಂಪೂರ್ಣ ಅರಿವಿನೊಂದಿಗೆ ಇವೆಲ್ಲ ನಡೆದಿದೆಯೆಂದು ಅದು ಹೇಳಿದೆ.
'ವಿದೇಶಿ ಮಿಲಿಟರಿಗೆ ಆರ್ಥಿಕ ನೆರವು' ರೂಪದಲ್ಲಿ ಅಮೆರಿಕ 1.9 ಬಿಲಿಯ ಡಾಲರ್ ಪಾಕಿಸ್ತಾನಕ್ಕೆ ಒದಗಿಸಿದೆಯಲ್ಲದೇ 5 ಬಿಲಿಯ ಡಾಲರ್ ಮೌಲ್ಯದ ಮಿಲಿಟರಿ ಸಾಮಗ್ರಿ ಮಾರಾಟಕ್ಕೆ ಪಾಕಿಸ್ತಾನದ ಜತೆ ಒಪ್ಪಂದಕ್ಕೆ ಸಹಿ ಹಾಕಿದೆಯೆಂದು ದಾಖಲೆಗಳು ತೋರಿಸಿವೆ.ವಿದೇಶಿ ಮಿಲಿಟರಿಗೆ ಆರ್ಥಿಕ ನೆರವು ಅಡಿಯಲ್ಲಿ 9/11 ನಂತರ ಪಾಕಿಸ್ತಾನಕ್ಕೆ ಅಮೆರಿಕ ರಕ್ಷಣಾ ಸಾಮಗ್ರಿ ಸರಬರಾಜಿಗೂ ಭಯೋತ್ಪಾದನೆ ವಿರುದ್ಧ ಹೋರಾಟಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಪೆಂಟಗಾನ್ ದಾಖಲೆಗಳು ಬಹಿರಂಗ ಮಾಡಿವೆ. |