ಯೆಮೆನ್ ಮತ್ತು ಸೌದಿ ಅರೇಬಿಯದಲ್ಲಿ ಅಲ್ ಖಾಯಿದಾ ಕಾರ್ಯಾಚರಣೆಗೆ ಹಣಕಾಸು ಒದಗಿಸುತ್ತಿದ್ದ ವ್ಯಕ್ತಿಯನ್ನು ಯೆಮೆನ್ ಅಧಿಕಾರಿಗಳು ಬಂಧಿಸಿದ್ದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಬಂಧಿತ ವ್ಯಕ್ತಿಯನ್ನು ಸೌದಿ ರಾಷ್ಟ್ರೀಯ ಹಸನ್ ಹುಸೇನ್ ಬಿನ್ ಅಲ್ವಾನ್ ಎನ್ನಲಾಗಿದ್ದು, ಯೆಮೆನ್ ಮತ್ತು ಸೌದಿ ಅರೇಬಿಯದಲ್ಲಿ ಅಲ್ ಖಾಯಿದಾ ಸಂಘಟನೆ ಆರಂಭಿಸಿದ ದಾಳಿಗಳಿಗೆ ಹಣಕಾಸು ಪೂರೈಸುತ್ತಿದ್ದ ಎಂದು ಹೆಸರು ಹೇಳದ ಭದ್ರತಾ ಅಧಿಕಾರಿ ತಿಳಿಸಿದ್ದಾರೆ.
ಅವನು ಅಲ್ ಖಾಯಿದಾದ ಅತ್ಯಂತ ಅಪಾಯಕಾರಿ ವ್ಯಕ್ತಿಯೆಂದು ಪರಿಗಣಿಸಲಾಗಿದೆಯೆಂದು ಅಧಿಕಾರಿ ತಿಳಿಸಿದ್ದಾರೆ.ಯೆಮೆನಿ ನಾಸರ್ ಅಲ ವಹಾಶಿ ನೇತೃತ್ವದಲ್ಲಿ ಸೌದಿ ಮತ್ತು ಯೆಮೆನಿ ಶಾಖೆಗಳನ್ನು ವಿಲೀನ ಮಾಡಿ 'ಅರೇಬಿಯನ್ ಪರ್ಯಾಯ ದ್ವೀಪದಲ್ಲಿ ಅಲ್ ಖಾಯಿದಾ' ಎಂದು ಹೆಸರಿಸಿದ್ದಾಗಿ ಯೆಮೆನ್ ಸ್ಥಳೀಯ ಶಾಖೆಯು ಇಂಟರ್‌ನೆಟ್‌ನಲ್ಲಿ ಪ್ರಸಾರ ಮಾಡಿದ ವಿಡಿಯೋ ಸಂದೇಶದಲ್ಲಿ ತಿಳಿಸಿದೆ.
ಅಲ್ ಖಾಯಿದಾ ನಾಯಕ ಒಸಾಮಾ ಬಿನ್ ಲಾಡೆನ್ ಪೂರ್ವಿಕರ ನೆಲೆಯಾದ ಯೆಮೆನ್ ಇತ್ತೀಚಿನ ವರ್ಷಗಳಲ್ಲಿ ವಿದೇಶಿ ಪ್ರವಾಸಿಗಳು, ಪ್ರವಾಸಿ ಸ್ಥಳಗಳು ಮತ್ತು ತೈಲನೆಲೆಗಳ ಮೇಲೆ ಅನೇಕ ದಾಳಿಗಳಿಗೆ ಸಾಕ್ಷಿಯಾಗಿದೆ. |