ತಾಲಿಬಾನ್ ವಿರುದ್ಧ ಸ್ವಾತ್‌ನಲ್ಲಿ ಪ್ರಸಕ್ತ ಮಿಲಿಟರಿ ಕಾರ್ಯಾಚರಣೆಯು ರಾಷ್ಟ್ರದಲ್ಲಿ ವಿರುದ್ಧ ಪರಿಣಾಮ ಬೀರುವ ಸಂಭವವಿದ್ದು, ಉಗ್ರವಾದ ಮತ್ತು ಭಯೋತ್ಪಾದನೆ ದಾಳಿಗಳ ಕಿಡಿ ಹೊತ್ತಿಸುತ್ತದೆಂದು ರಾಜಕಾರಣಿಯಾಗಿರುವ ಪಾಕಿಸ್ತಾನದ ಮಾಜಿ ಕ್ರಿಕೆಟ್ ಆಟಗಾರ ಇಮ್ರಾನ್ ಖಾನ್ ಭೀತಿ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನ ಆತ್ಮಹತ್ಯಾ ಮಾರ್ಗವನ್ನು ಹಿಡಿದಿದೆಯೆಂದು ಪಾಕಿಸ್ತಾನ ತೆಹ್ರಿಕ್ ಇನ್ಪಾಸ್ ಅಧ್ಯಕ್ಷ ಇಮ್ರಾನ್ ತಿಳಿಸಿದ್ದಾರೆ.
ಅಮೆರಿಕದ ಸಲಹೆ ಮೇಲೆ ತಾಲಿಬಾನ್ ವಿರುದ್ಧ ಸಂಪೂರ್ಣ ಯುದ್ಧ ಆರಂಭಿಸಿರುವುದಕ್ಕೆ ಪಾಕಿಸ್ತಾನ ಸರ್ಕಾರವನ್ನು ಅವರು ಟೀಕಿಸಿದರು.ಅಧ್ಯಕ್ಷ ಜರ್ದಾರಿ ಏಪ್ರಿಲ್ ಕೊನೆಯಲ್ಲಿ ವಾಷಿಂಗ್ಟನ್‌ಗೆ ಭೇಟಿ ನೀಡಿ, ಅಮೆರಿಕದ ಜತೆ ವರ್ಷಕ್ಕೆ 1.5 ಬಿಲಿಯ ಡಾಲರ್ ನೆರವಿನ ಐದು ವರ್ಷಗಳ ಒಪ್ಪಂದ ಮಾಡಿಕೊಂಡಿದ್ದಕ್ಕೂ ಮತ್ತು ತಾಲಿಬಾನ್ ವಿರುದ್ಧ ಕಾರ್ಯಾಚರಣೆಗೂ ಹೊಂದಿಕೆಯಾಗುತ್ತದೆಂದು ಸಂಡೇ ಟೈಮ್ಸ್ ಜತೆ ಮಾತನಾಡಿದ ಖಾನ್ ಗಮನಸೆಳೆದರು. ಸ್ವಾತ್ ಜನರನ್ನು ಉಳಿಸಲು ಈ ಕಾರ್ಯಾಚರಣೆ ನಡೆಸಲಾಗುತ್ತಿದೆಯೇ ಅಥವಾ ಅಮೆರಿಕನ್ನರಿಂದ ಡಾಲರ್ ಪಡೆಯಲು ನಡೆಸಲಾಗಿದೆಯೇ ಎಂದು ಅವರು ಪ್ರಶ್ನಿಸಿದ್ದಾರೆ.
10 ದಿನಗಳ ಕೆಳಗೆ, ಸ್ವಾತ್ ಕಣಿವೆಯಲ್ಲಿ ತಾಲಿಬಾನ್ ಜತೆ ಶಾಂತಿ ಒಪ್ಪಂದಕ್ಕೆ ಸಂಸತ್ತಿನಲ್ಲಿ ನಿರ್ಣಯ ಅನುಮೋದಿಸಲಾಯಿತು. ಆಗ ಚರ್ಚೆ ನಡೆಯಲಿಲ್ಲವೇಕೆ? ಮಿಲಿಟರಿ ಕಾರ್ಯಾಚರಣೆಯು ಕಟ್ಟಕಡೆಯ ಅಸ್ತ್ರವಾಗಬೇಕಿತ್ತು ಎಂದು ಅವರು ಹೇಳಿದರು. ತಾವು ತಾಲಿಬಾನ್ ಪರವಲ್ಲವೆಂದು ಹೇಳಿದ ಇಮ್ರಾನ್, ಇತರ ಆಯ್ಕೆಗಳ ಕಡೆ ನಾವು ಗಮನಹರಿಸಬೇಕಿತ್ತೆನ್ನುವುದು ತಮ್ಮ ವಾದ.
ಭಾರೀ ಫಿರಂಗಿ, ಹೆಲಿಕಾಪ್ಟರ್ ಗನ್‌ಶಿಪ್ ಮತ್ತು ಫೈಟರ್ ಜೆಟ್‌ಗಳನ್ನು ನಾಗರಿಕ ಪ್ರದೇಶಗಳಲ್ಲಿ ಬಳಸಿದ್ದನ್ನು ಹೇಗೆ ಸಮರ್ಥಿಸಿಕೊಳ್ಳುತ್ತೀರಿ? ಏತನ್ಮಧ್ಯೆ, ಎಲ್ಲ ತಾಲಿಬಾನ್ ಮುಖಂಡರು ತಲೆತಪ್ಪಿಸಿಕೊಂಡಿದ್ದು ತಿರುಗೇಟು ನೀಡುತ್ತಾರೆಂದು ಅವರು ಹೇಳಿದರು. |