ಶಿಕ್ಷೆಯ ಅವಧಿಗಳನ್ನು ಪೂರೈಸಿದ ಬಳಿಕವೂ ಒಟ್ಟು 25 ಭಾರತೀಯ ಕೈದಿಗಳು ಪಾಕಿಸ್ತಾನದ ಜೈಲಿನಲ್ಲಿ ಕೊಳೆಯುತ್ತಿರುವ ಬಗ್ಗೆ ಮಾನವ ಹಕ್ಕು ಕಾರ್ಯಕರ್ತ ಅನ್ಸಾರ್ ಬರ್ನಿ ಅಧ್ಯಕ್ಷ ಅಸೀಫ್ ಅಲಿ ಜರ್ದಾರಿ ಅವರಿಗೆ ಪತ್ರ ಬರೆದಿದ್ದಾರೆ. ಶಿಕ್ಷೆಯ ಅವಧಿ ಪೂರೈಸಿದ ಬಳಿಕವೂ ಅವರನ್ನು ಬಂಧನದಲ್ಲಿ ಇಟ್ಟಿರುವುದು ಅಕ್ರಮ ಮತ್ತು ಕಾನೂನುಬಾಹಿರ ಎಂದು ಅವರು ಹೇಳಿದ್ದಾರೆ.
ಅಧ್ಯಕ್ಷ ಜರ್ದಾರಿ ಅವರಿಗೆ ಬರ್ನಿ ಬರೆದಿರುವ ಪತ್ರದಲ್ಲಿ ಶಿಕ್ಷೆಯ ಅವಧಿಯನ್ನು ಪೂರೈಸಿದ ಎಲ್ಲ ಭಾರತೀಯ ಕೈದಿಗಳು ಮತ್ತಿತರ ರಾಷ್ಟ್ರಗಳ ಕೈದಿಗಳನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿದ್ದಾರೆ. ಶಿಕ್ಷೆಯ ಅವಧಿ ಮುಗಿದ ಬಳಿಕವೂ ಭಾರತೀಯ ಕೈದಿಗಳನ್ನು ಬಂಧನದಲ್ಲಿಟ್ಟಿರುವುದು ಅಕ್ರಮ ಮತ್ತು ಕಾನೂನುಬಾಹಿರವಾಗಿದ್ದು, ನ್ಯಾಯ, ಮಾನವ ಘನತೆ ಮತ್ತು ಹಕ್ಕುಗಳ ಸ್ಪಷ್ಟ ಉಲ್ಲಂಘನೆಯೆಂದು ಮಾಜಿ ಮಾನವ ಹಕ್ಕು ರಕ್ಷಣೆ ಸಚಿವ ಬರ್ನಿ ತಿಳಿಸಿದ್ದಾರೆ.
ಭಾರತೀಯ ಕೈದಿಗಳ ಪೈಕಿ ಮುಂಬೈ ನಿವಾಸಿ 38 ವರ್ಷ ವಯಸ್ಸಿನ ಟೀನಾ ಪೆಕಾರನ್ನು 12 ವರ್ಷಗಳ ಕೆಳಗೆ ಬಂಧಿಸಲಾಗಿದ್ದು, ಒಂದು ವರ್ಷದ ಶಿಕ್ಷಾವಧಿ ನೀಡಿ 1000 ರೂ. ದಂಡ ವಿಧಿಸಲಾಗಿತ್ತು. 37 ವರ್ಷ ವಯಸ್ಸಿನ ನಖಾಯ 2007ರಲ್ಲಿ ನಾಲ್ಕು ತಿಂಗಳ ಶಿಕ್ಷೆಗೆ ಗುರಿಯಾಗಿ ಜೈಲು ಸೇರಿದ್ದರು. ರಾಮ್ ಪ್ರಕಾಶ್‌ಗೆ 1997ರಲ್ಲಿ 10 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
ಸಾಜುರಾಂಗೆ 2004ರಲ್ಲಿ ನಾಲ್ಕು ತಿಂಗಳ ಶಿಕ್ಷೆ, ಗೋಮಾಗ್ ಸಿಂಗ್‌ಗೆ ನಾಲ್ಕು ವರ್ಷಗಳ ಶಿಕ್ಷೆ, ಗಣೇಶ್ ಪಾಂಡಿಗೆ ಅದೇ ವರ್ಷ ಎರಡು ತಿಂಗಳ ಶಿಕ್ಷೆ, ಡಿನ್ ಮಹ್ಮದ್‌ಗೆ ಜೂ.2007ರಲ್ಲಿ ಮೂರು ತಿಂಗಳ ಶಿಕ್ಷೆ, ಶಹಾಬುದ್ದೀನ್ ಮಿರ್ 1991ರಲ್ಲಿ ಅಕ್ರಮವಾಗಿ ಪಾಕಿಸ್ತಾನದಕ್ಕೆ ನುಸುಳಿದ ಆರೋಪದ ಮೇಲೆ ಜೈಲುಶಿಕ್ಷೆ ಮತ್ತು ಇಲ್ಯಾಸ್ ಎಂಬವರಿಗೆ 2003ರಲ್ಲಿ ಎರಡು ವರ್ಷಗಳ ಶಿಕ್ಷೆ ವಿಧಿಸಲಾಗಿತ್ತು. ಮಾನಸಿಕ ಅಸ್ವಸ್ಥ ಮಹಿಳೆಯೊಬ್ಬರು ಕೂಡ 2007ರಿಂದ ಬಿಡುಗಡೆಗೆ ಕಾಯುತ್ತಿದ್ದಾರೆ. |