ಇಸ್ರೇಲಿನ ಪ್ರಧಾನಮಂತ್ರಿ ಬೆಂಜಮಿನ್ ನೆತಾನ್ಯಾಹು ವಾಷಿಂಗ್ಟನ್ನಿನ ಒತ್ತಡಕ್ಕೆ ಮಣಿದು ಅಂತಿಮವಾಗಿ ಪ್ರತ್ಯೇಕ ಪ್ಯಾಲೆಸ್ಟೀನ್ ರಾಷ್ಟ್ರ ಸ್ಥಾಪನೆಗೆ ಷರತ್ತುಬದ್ಧ ಒಪ್ಪಿಗೆ ನೀಡಿದ್ದಾರೆ. ಪ್ಯಾಲೆಸ್ಟೀನ್ ಸ್ವತಂತ್ರ ರಾಷ್ಟ್ರ ಸ್ಥಾನಮಾನದ ಬಗ್ಗೆ ನೆತಾನ್ಯಾಹು ನಿಲುವು ಪ್ರಮುಖ ಮುನ್ನಡೆಯೆಂದು ಒಬಾಮಾ ಕರೆ ನೀಡಿರುವ ನಡುವೆ, ಜೆರುಸಲೆಂ ನಗರ ಹಂಚಿಕೊಳ್ಳುವ ಅಥವಾ ಪ್ಯಾಲೆಸ್ಟೀನಿಯರನ್ನು ನಿರಾಶ್ರಿತರೆಂದು ಒಪ್ಪಿಕೊಳ್ಳಲು ಇಸ್ರೇಲ್ ನಿರಾಕರಣೆಯನ್ನು ಪ್ಯಾಲೆಸ್ಟೀನ್ ಅಧ್ಯಕ್ಷ ಮಹಮದ್ ಅಬ್ಬಾಸ್ ಖಂಡಿಸಿದ್ದಾರೆ.
ಈ ಮುಂಚೆ ಪ್ಯಾಲೆಸ್ಟೀನಿಯರಿಗೆ ಸ್ವತಂತ್ರ ರಾಷ್ಟ್ರ ನೀಡುವುದಕ್ಕೆ ಬೆಂಬಲಿಸಿರದಿದ್ದ ನೆತಾನ್ಯಾಹು ಈಗ ಪ್ಯಾಲೆಸ್ಟೀನ್ ರಾಷ್ಟ್ರ ನಿರ್ಮಾಣಕ್ಕೆ ಒಪ್ಪಿಗೆಯಿತ್ತರೂ ಹೊಸ ರಾಷ್ಟ್ರದಲ್ಲಿ ಯಾವುದೇ ಸೇನೆ ಇರಬಾರದು ಮತ್ತು ಪ್ಯಾಲೆಸ್ಟೀನಿಯರು ಇಸ್ರೇಲನ್ನು ಯಹೂದಿ ರಾಷ್ಟ್ರವೆಂದು ಮಾನ್ಯತೆ ನೀಡಬೇಕೆಂಬ ಅಂತಾರಾಷ್ಟ್ರೀಯ ಖಾತರಿಯನ್ನು ಮುಂಚಿತವಾಗಿ ನೀಡಬೇಕೆಂಬ ಷರತ್ತುಗಳನ್ನು ವಿಧಿಸಿದ್ದಾರೆ.
ನಮಗೆ ಮಿಲಿಟರಿರಹಿತ ಮತ್ತು ಭದ್ರತಾ ಅಗತ್ಯಗಳಿಗೆ ಖಾತರಿ ಸಿಕ್ಕಿದರೆ, ಇಸ್ರೇಲನ್ನು ಯಹೂದಿಗಳ ರಾಷ್ಟ್ರವೆಂದು ಪ್ಯಾಲೆಸ್ಟೀನ್ ಮಾನ್ಯತೆ ನೀಡಿದರೆ ನಾವು ಮುಂದಿನ ಶಾಂತಿ ಒಪ್ಪಂದಕ್ಕೆ ಸಿದ್ಧರಾಗುತ್ತೇವೆಂದು ನೆತಾನ್ಯಾಹು ಟೆಲ್ ಅವೀವ್ ಬಳಿ ಬಾರ್ ಇಲ್ಲಾನ್ ವಿವಿಯಲ್ಲಿ ನೆತಾನ್ಯೂ ಹೇಳಿದ್ದರು. |