ಪ್ರಕ್ಷುಬ್ಧ ವಾಯವ್ಯ ಬುಡಕಟ್ಟುಪ್ರದೇಶದಲ್ಲಿ ತಾಲಿಬಾನ್ ವಿರುದ್ಧ ಪೂರ್ಣಸ್ವರೂಪದ ದಾಳಿಯನ್ನು ಪಾಕಿಸ್ತಾನ ಆರಂಭಿಸಿದ್ದು, ಎಲ್ಲ ಉಗ್ರಗಾಮಿಗಳು ನಾಶವಾಗುವ ತನಕ ದಾಳಿ ಮುಂದುವರಿಯುವುದೆಂದು ಘೋಷಿಸಿದೆ. ವಾಜಿರಿಸ್ತಾನ ಸೇರಿದಂತೆ ಬುಡಕಟ್ಟು ಪ್ರದೇಶಗಳಲ್ಲಿ ಪೂರ್ಣಮಟ್ಟದ ಕಾರ್ಯಾಚರಣೆಯನ್ನು ಸರ್ಕಾರ ಆರಂಭಿಸಿದೆ ಎಂದು ವಾಯವ್ಯ ಪ್ರಾಂತ್ಯದ ರಾಜ್ಯಪಾಲ ಒವೈಸ್ ಅಹ್ಮದ್ ಘಾನಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಉಗ್ರಗಾಮಿಗಳ ಮೂಲೋತ್ಪಾಟನೆ ತನಕ ಕಾರ್ಯಾಚರಣೆ ಮುಂದುವರಿಯುತ್ತದೆಂದು ಹೇಳಿದ ಘಾನಿ, ತೆಹ್ರಿಕೆ ತಾಲಿಬಾನ್ ಮುಖಂಡ ಬೈತುಲ್ಲಾ ಮೆಹಸೂದ್ ಮತ್ತು ಅವನ ಹೋರಾಟಗಾರರ ವಿರುದ್ಧ ದಕ್ಷಿಣ ವಾಜಿರಿಸ್ತಾನದಲ್ಲಿ ಪೂರ್ಣಸ್ವರೂಪದ ಕಾರ್ಯಾಚರಣೆ ನಡೆಸಲು ಪಾಕಿಸ್ತಾನ ಸೇನೆಗೆ ಆದೇಶಿಸಿರುವುದಾಗಿ ಹೇಳಿದ್ದಾರೆ.
ಮಿಲಿಟರಿ ಮತ್ತು ಕಾನೂನು ಜಾರಿ ಸಂಸ್ಥೆಗಳಿಗೆ ಪೂರ್ಣಸ್ವರೂಪದ ಕಾರ್ಯಾಚರಣೆ ಕೈಗೊಂಡು ಎಲ್ಲ ಸಂಪನ್ಮೂಲ ಬಳಸಿಕೊಂಡು ಈ ಹಂತಕರನ್ನು ನಾಶ ಮಾಡುವಂತೆ ಆದೇಶಿಸಲಾಗಿದೆಯೆಂದೂ ತಿಳಿಸಿದರು.ಏತನ್ಮಧ್ಯೆ, ಪಾಕಿಸ್ತಾನಕ್ಕೆ ಸ್ವಾತ್ ಕಣಿವೆ ಕಾರ್ಯಾಚರಣೆ ಬಗ್ಗೆ ಯಾವುದೇ ವಿದೇಶಿ ಸಲಹೆಯ ಅಗತ್ಯವಿಲ್ಲವೆಂದು ಸೇನಾ ಮುಖಂಡ ಜನರಲ್ ಕಯಾನಿ ತಿಳಿಸಿದ್ದಾರೆ.
ನಮ್ಮ ರಾಷ್ಟ್ರವನ್ನು ನಮಗಿಂತ ಚೆನ್ನಾಗಿ ಅರ್ಥಮಾಡಿಕೊಳ್ಳಲು ಯಾರಿಗೂ ಸಾಧ್ಯವಿಲ್ಲ. ಸಾಂಪ್ರದಾಯಿಕ ಯುದ್ಧ ಮತ್ತು ಪ್ರಸಕ್ತ ಯುದ್ಧಕ್ಕೆ ವ್ಯತ್ಯಾಸವಿದೆ. ಪ್ರಸಕ್ತ ಯುದ್ಧದಲ್ಲಿ ಸ್ನೇಹಿತರು ಮತ್ತು ಶತ್ರುಗಳ ನಡುವೆ ವ್ಯತ್ಯಾಸ ಗುರುತಿಸುವುದು ಕಷ್ಟವೆಂದು ಅವರು ವಿಶ್ಲೇಷಿಸಿದರು. |