ಶ್ರೀಮಂತ ದೇವರಾದ ವೆಂಕಟೇಶ್ವರ ವಿದೇಶಗಳಲ್ಲೂ ತನ್ನ ಅಸ್ತಿತ್ವವನ್ನು ಮೆರೆಯುತ್ತಿದ್ದು, ಉತ್ತರಕೆರೊಲಿನ ಪಟ್ಟಣ ಕ್ಯಾರಿಯಲ್ಲಿ ವೆಂಕಟೇಶ್ವರನಿಗೆ ಮುಡಿಪಾದ ನೂತನ ಮಂದಿರ ಪ್ರತಿಷ್ಠಾಪನೆಯಾಗಿದೆ. ಚಾಪೆಲ್ ಹಿಲ್ ಮತ್ತು ಡರ್ಹಾಮ್‌ನ ಭಾರತೀಯ ಮೂಲದ ಅಮೆರಿಕನ್ನರು ಬಾಲಾಜಿ ಎಂದೂ ಕರೆಯುವ ವೆಂಕಟೇಶ್ವರ ಮೂರ್ತಿಯ ಪೂಜಾಮಂದಿರ ಸ್ಥಾಪನೆಯಲ್ಲಿ ಅವಿರತ ಶ್ರಮಿಸಿದ್ದಾರೆ.ಟ್ರಯಾಂಗಲ್ ಎಂದು ಹೆಸರಾದ ಮೂರು ಪಟ್ಟಣಗಳ ಪ್ರದೇಶದಲ್ಲಿ ಅಂದಾಜು ಒಂದು ಲಕ್ಷ ಭಾರತೀಯ-ಅಮೆರಿಕನ್ನರು ಮತ್ತು ದಕ್ಷಿಣ ಏಷ್ಯನ್ನರಿದ್ದಾರೆ. ಈ ಮಂದಿರದಲ್ಲಿ ಪ್ರತಿಷ್ಠಾಪಿಸಲಾದ ದೇವರ ಮೂರ್ತಿಗಳನ್ನು 3.5 ಮಿಲಿಯ ಡಾಲರ್ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಸುಮಾರು ಎರಡು ಟನ್ ತೂಕದ 9 ಅಡಿ ಎತ್ತರದ ವೆಂಕಟೇಶ್ವರ ಮೂರ್ತಿ ಮತ್ತಿತರ ಇತರೆ ಮೂರ್ತಿಗಳ ಪ್ರತಿಷ್ಠಾಪನೆಯೊಂದಿಗೆ ಅವು ಜೀವತುಂಬಿಕೊಂಡಂತೆ ಕಾಣುತ್ತಿವೆ.ವೆಂಕಟೇಶ್ವರ ಮೂರ್ತಿ ರತ್ನಲೇಪಿತ ಕಿರೀಟ, ಕಿವಿ ಓಲೆಗಳು ಮತ್ತು ಅಮೂಲ್ಯ ಲೋಹಗಳಿಂದ ತಯಾರಿಸಿದ ಕಮಲದ ಆಕಾರದ ಪಾದಗಳನ್ನು ಹೊಂದಿರುವುದಾಗಿ ದೇವಸ್ಥಾನದ ಅಧಿಕಾರಿಗಳು ತಿಳಿಸಿದ್ದು, ಮೂರ್ತಿಗಳನ್ನು ಭಾರತದಲ್ಲಿ ತಯಾರಿಸಿ ಅಮೆರಿಕಕ್ಕೆ ಈ ವರ್ಷಾರಂಭದಲ್ಲೇ ಕಳಿಸಲಾಗಿದೆ. ಸುಮಾರು 5 ದಿನಗಳ ಕಾಲ ನಡೆದ ಪ್ರಾಣಪ್ರತಿಷ್ಠೆ ಉತ್ಸವದಲ್ಲಿ ನೆರೆದಿದ್ದ ಸಾವಿರಾರು ಭಕ್ತರಿಗೆ ಸುಮಾರು 150 ಜನ ಕಾರ್ಯಕರ್ತರು ನೆರವು ನೀಡಿದರು. ಬೃಹತ್ ಪ್ರತಿಮೆಯನ್ನು ಪ್ರತಿಷ್ಠಾಪನೆ ಮಾಡುತ್ತಿದ್ದಂತೆ ಭಕ್ತರು ತಮ್ಮ ಆಭರಣಗಳು ಮತ್ತಿತರ ಅಮೂಲ್ಯ ವಸ್ತುಗಳನ್ನು ಗರ್ಭಗುಡಿಯಲ್ಲಿ ಕಾಣಿಕೆಯಾಗಿ ನೀಡಿದರು. ಎಸ್‌ವಿ ದೇವಸ್ಥಾನವೆಂದು ಹೆಸರಾದ ಈ ಪೂಜಾಮಂದಿರ ಉತ್ತರ ಕೆರೊಲಿನಾದಲ್ಲಿ ವೆಂಕಟೇಶ್ವರನಿಗೆ ಪ್ರಥಮವಾಗಿ ಅರ್ಪಿತವಾಗಿದ್ದು, ಅಮೆರಿಕದ ಇತರ ಕಡೆ ಕೂಡ ಇದೇ ಮಾದರಿಯ ಮಂದಿರಗಳಿವೆ.ಪೆನ್ಸಿಲ್‌ವೇನಿಯದ ಪಿಟ್ಸ್‌ಬರ್ಗ್ ವೆಂಕಟೇಶ್ವರ ದೇವಸ್ಥಾನದ ನೆಲೆಯಾಗಿದ್ದು ಉತ್ತರ ಅಮೆರಿಕದಲ್ಲಿ ಪ್ರಥಮ ಹಿಂದೂ ಪೂಜಾಮಂದಿರವೆಂದು ಹೇಳಲಾಗಿದೆ.ನ್ಯೂ ಜೆರ್ಸಿ ಮತ್ತು ಜಾರ್ಜಿಯದಲ್ಲಿ ಕೂಡ ಇನ್ನೆರಡು ವೆಂಕಟೇಶ್ವರ ಮಂದಿರಗಳಿವೆ.ಭಜನೆಗಳು, ಭಕ್ತಿಗೀತೆಗಳು, ಸಂಗೀತ, ಸ್ಥಳೀಯ ಮಕ್ಕಳ ಗುರುಕುಲದ ಪ್ರದರ್ಶನಗಳು, ಹರೆ ಕೃಷ್ಣ ಭಕ್ತರಿಂದ ನೃತ್ಯಪ್ರದರ್ಶನ, ಅಣ್ಣಮಾಚಾರ್ಯ ಹುಟ್ಟುಹಬ್ಬ ಮತ್ತು ಕೇರಳ ನೃತ್ಯ ಪ್ರದರ್ಶನ ಮುಂತಾದ ಕಾರ್ಯಕ್ರಮಗಳು ಉದ್ಘಾಟನೆ ಸಮಾರಂಭಕ್ಕೆ ಕಳೆಕಟ್ಟಿದವು. |