ಎಲ್‌ಟಿಟಿಇ ವಿರುದ್ಧ ಮುಗಿದ ಕ್ರೂರ ಯುದ್ಧದಲ್ಲಿ ಒಂದು ಲಕ್ಷ ಅಮಾಯಕರು ಪ್ರಾಣಕಳೆದುಕೊಂಡ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಶ್ರೀಲಂಕಾ ಅಧ್ಯಕ್ಷ ಮಹೀಂದ್ರ ರಾಜಪಕ್ಷ ಸಂತ್ರಸ್ತ ತಮಿಳು ನಾಗರಿಕರಿಗೆ ಪುನರ್ವಸತಿ ಒದಗಿಸುವ ಸವಾಲು ತಮ್ಮ ಮುಂದಿದೆಯೆಂದು ಹೇಳಿದ್ದಾರೆ. ಎಲ್‌ಟಿಟಿಇ ಜತೆ ಮೂರು ದಶಕಗಳ ಕಾಲದ ಹೋರಾಟ ಅಂತ್ಯಗೊಂಡ ಬಳಿಕ ಮ್ಯಾನ್ಮಾರ್‌ಗೆ ಅಧಿಕೃತ ಭೇಟಿ ನೀಡಿರುವ ರಾಜಪಕ್ಷ, ಯುದ್ಧಪೀಡಿತ ವಲಯದಲ್ಲಿ ಪುನರ್ವಸತಿ ಕಲ್ಪಿಸಿ ಜನರ ಜೀವನದಲ್ಲಿ ಸಹಜತೆ ಮೂಡಿಸುವುದು ತಮ್ಮ ಸವಾಲು ಎಂದು ಹೇಳಿದರು.
ಸುಮಾರು 30 ವರ್ಷಗಳ ಕಾಲ ಭಯೋತ್ಪಾದನೆ ವಿರುದ್ಧ ಕ್ರೂರ ಹೋರಾಟದಲ್ಲಿ ಒಂದು ಲಕ್ಷ ಅಮಾಯಕರು ಬಲಿಯಾಗಿದ್ದಾರೆಂದು ಮ್ಯಾನ್ಮಾರ್ ನೂತನ ರಾಜಧಾನಿ ನೈ ಪೈ ಟಾವ್‌ನಲ್ಲಿ ಹೇಳಿದರು.ಸರ್ವರೂ ಬೌದ್ಧಧರ್ಮದ ಬೋಧನೆಗೆ ಅನುಗುಣವಾಗಿ ಸಮಾನತೆ ಮತ್ತು ಸಾಮರಸ್ಯದಿಂದ ಬದುಕುವಂತ ಮುಕ್ತ ಮತ್ತು ಸ್ವತಂತ್ರ ಸಮಾಜ ಸೃಷ್ಟಿಸುವುದಾಗಿ ಅಧ್ಯಕ್ಷರು ತಿಳಿಸಿದ್ದಾರೆ.
ರಾಜಪಕ್ಷೆ ಮತ್ತು ಶ್ರೀಲಂಕಾ ನಿಯೋಗವನ್ನು ನಯ್ ಪೇ ಟಾವ್ ವಿಮಾನನಿಲ್ದಾಣದಲ್ಲಿ ಹಿರಿಯ ಜನರಲ್ ಥಾನ್ ಶ್ವೆ ಸ್ವಾಗತಿಸಿದರು. ಸಂತ್ರಸ್ತರ ಅಭಿವೃದ್ಧಿಗೆ 50,000 ಡಾಲರ್ ಕೊಡುಗೆ ನೀಡಿದ ಮ್ಯಾನ್ಮಾರ್ ಸರ್ಕಾರಕ್ಕೆ ಅವರು ಧನ್ಯವಾದ ಅರ್ಪಿಸಿದರು. |