ಭಾರತದಲ್ಲಿ ಪಾಕಿಸ್ತಾನ ನೆಲದಿಂದ ಭಯೋತ್ಪಾದನೆ ದಾಳಿಗಳನ್ನು ನಿಲ್ಲಿಸುವಂತೆ ಮತ್ತು ಭಯೋತ್ಪಾದನೆ ಮೂಲಸೌಲಭ್ಯವನ್ನು ನಾಶಮಾಡುವಂತೆ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಮಂಗಳವಾರ ಪಾಕ್ ಅಧ್ಯಕ್ಷ ಅಸೀಫ್ ಅಲಿ ಜರ್ದಾರಿ ಅವರಿಗೆ ಕಟುವಾಗಿ ಸೂಚಿಸಿದ್ದಾರೆ. 6 ರಾಷ್ಟ್ರಗಳ ಶಾಂಘಾಯ್ ಸಹಕಾರ ಸಂಘಟನೆ ಶೃಂಗಸಭೆ ನೇಪಥ್ಯದಲ್ಲಿ ನಡೆದ ಮುಖಾಮುಖಿ ಭೇಟಿಯಲ್ಲಿ ಡಾ. ಸಿಂಗ್ ಮೇಲಿನ ಪ್ರತಿಕ್ರಿಯೆ ನೀಡಿದರು.
ಭೇಟಿಯ ಕಾಲದಲ್ಲಿ ಭಾರತದ ವಿರುದ್ಧ ಗುರಿಯಿರಿಸಿದ ಭಯೋತ್ಪಾದನೆ ಮಟ್ಟಹಾಕಲು ಪಾಕಿಸ್ತಾನದ ನಿಷ್ಕ್ರಿಯತೆ ಬಗ್ಗೆ ಭಾರತದ ಅತೃಪ್ತಿಯನ್ನು ಸಿಂಗ್ ಅವರು ತಿಳಿಸಿದರೆಂದು ಹೇಳಲಾಗಿದೆ. ಮುಂಬೈ ಭಯೋತ್ಪಾದನೆ ದಾಳಿಯ ಸೂತ್ರಧಾರ ಹಫೀಜ್ ಮಹಮ್ಮದ್ ಸಯೀದ್‌ನನ್ನು ಬಂಧಿಸಿ ಬಿಡುಗಡೆ ಮಾಡಿದ ಕ್ರಮದ ವಿರುದ್ಧ ಕೂಡ ಸಿಂಗ್ ಅಸಾಮಾಧಾನ ವ್ಯಕ್ತಪಡಿಸಿದರೆಂದು ಹೇಳಲಾಗಿದೆ.
ಭಾರತ ಮತ್ತು ಪಾಕಿಸ್ತಾನ ನಡುವೆ ಪ್ರಥಮ ಉನ್ನತ ಮಟ್ಟದ ಸಂಪರ್ಕ ಇದಾಗಿದೆ. ನವದೆಹಲಿಯಲ್ಲಿ ಪಾಕ್ ಹೈಕಮೀಷನರ್ ಶಾಹಿದ್ ಮಲಿಕ್ ಅವರು ವಿದೇಶಾಂಗ ಕಾರ್ಯದರ್ಶಿ ಶಿವಶಂಕರ ಮೆನನ್ ಅವರನ್ನು ಕಳೆದ ವಾರ ಭೇಟಿ ಮಾಡಿದ್ದಾಗ ಈ ಕುರಿತು ಪ್ರಸ್ತಾಪ ಮಾಡಿದ್ದರೆಂದು ಹೇಳಲಾಗಿದೆ. |