ಅಟ್ಲಾಂಟಿಕ್ ಸಾಗರಕ್ಕೆ ಬಿದ್ದು ಅಪಘಾತಕ್ಕೀಡಾದ ಏರ್ ಫ್ರಾನ್ಸ್ ಜೆಟ್ ವಿಮಾನದ ಇನ್ನಷ್ಟು ಅವಶೇಷವನ್ನು ಬ್ರೆಜಿಲ್ ಮಿಲಿಟರಿ ಪತ್ತೆಹಚ್ಚಿದ್ದು, ಅಪಘಾತದಲ್ಲಿ ಮೃತಪಟ್ಟ ಇನ್ನುಳಿದವರ ಶವಗಳು ಮಾತ್ರ ಪತ್ತೆಯಾಗಿಲ್ಲ. ಸುಮಾರು 49 ದೇಹಗಳು ಪತ್ತೆಯಾದ ಜಲಪ್ರದೇಶದ ಸಮೀಪ ಹೆಚ್ಚುವರಿ ಅವಶೇಷವನ್ನು ನೀರಿನಿಂದ ಹೊರತೆಗೆಯಲಾಗಿದೆ ಎಂದು ವಾಯುಪಡೆ ವಕ್ತಾರ ಲೆ.ಕರ್ನಲ್ ಹೆನ್ರಿ ಮುನೋಝ್ ವರದಿಗಾರರಿಗೆ ತಿಳಿಸಿದರು.
ಬ್ರೆಜಿಲ್ ತೀರದಲ್ಲಿ 1000 ಕಿಮೀ ಸುತ್ತಳತೆಯಲ್ಲಿ ಕೆಟ್ಟಹವೆಯ ದಿನಗಳು ಮುಗಿದಿದ್ದು, ಮಿಲಿಟರಿಯಿಂದ ವೈಮಾನಿಕ ಶೋಧನೆಗೆ ಅವಕಾಶ ಕಲ್ಪಿಸಿದೆ.ಶೋಧ ಕಾರ್ಯಾಚರಣೆ ಅಂತ್ಯಕ್ಕೆ ಯಾವುದೇ ದಿನಾಂಕ ನಿಗದಿಮಾಡಿಲ್ಲ. ಜೂ.17ರಿಂದ ಪ್ರತಿ ದಿನಕ್ಕೊಮ್ಮೆ ಮರುಪರಿಶೀಲನೆ ಮಾಡಲಾಗುವುದು ಎಂದು ವಾಯುದಳದ ವಕ್ತಾರ ತಿಳಿಸಿದ್ದಾರೆ.
ವಿಮಾನದ ಅವಶೇಷಗಳು ನೀರಿನ ಹರಿವಿನ ವೇಗಕ್ಕೆ ಕೊಚ್ಚಿಕೊಂಡುಹೋದ ಅವಶೇಷಗಳು ಮತ್ತು ಮೃತದೇಹಗಳು ಕೊಳೆಯುವಿಕೆಯು ಶೋಧ ಕಾರ್ಯಕ್ಕೆ ಅಡಚಣೆಯಾಗಿದೆ. ಫ್ರೆಂಚ್ ಸಬ್‌ಮೆರಿನ್ ಮತ್ತು ಅಮೆರಿಕ ಜಲಗರ್ಭದ ಆಲಿಕೆ ಯಂತ್ರವನ್ನು ವಿಮಾನದ ಕಪ್ಪುಪೆಟ್ಟಿಗೆಯ ಸಂಕೇತಗಳನ್ನು ಗ್ರಹಿಸಲು ಬಳಸಲಾಗಿದೆ. |