ಟೆಕ್ಸಾಸ್‌ನ ಸ್ಟಾಫೋರ್ಡ್ ನಗರದ ಉಪ ಮೇಯರ್ ಹುದ್ದೆಗೆ ಭಾರತೀಯ ಮೂಲದ ಅಮೆರಿಕನ್ ಆಯ್ಕೆಯಾಗಿದ್ದು, ಅಮೆರಿಕದ ರಾಜ್ಯದಲ್ಲಿ ಈ ಹುದ್ದೆಯನ್ನು ಅಲಂಕರಿಸಿರುವ ಸಮುದಾಯದ ಪ್ರಥಮ ವ್ಯಕ್ತಿಯಾಗಲಿದ್ದಾರೆ. ಕೆನ್ ಮ್ಯಾಥಿವ್ ಅವರನ್ನು ಸ್ಟಾಫರ್ಡ್ ನಗರದ ಉಪಮೇಯರ್(ಮೇಯರ್ ಪ್ರೊ ಟೆಂ) ಸ್ಥಾನಕ್ಕೆ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.
ಮ್ಯಾಥಿವ್ ಟೆಕ್ಸಾಸ್ ರಾಜ್ಯದಲ್ಲಿ ಮೇಯರ್ ಪ್ರೊ ಟೆಂ ಸ್ಥಾನಕ್ಕೆ ಆಯ್ಕೆಯಾದ ಪ್ರಥಮ ಇಂಡೊ-ಅಮೆರಿಕನ್ ಎನಿಸಿದ್ದಾರೆ. ಇಬ್ಬರು ಹೆಣ್ಣುಮಕ್ಕಳನ್ನು ಹೊಂದಿರುವ ಮ್ಯಾಥಿವ್ ಎಲ್ಲ ಮಟ್ಟಗಳಲ್ಲಿ ದಕ್ಷ ಮತ್ತು ಸ್ವಚ್ಛ ಸರ್ಕಾರವನ್ನು ಕಾಣಲು ತಾವು ಬಯಸುವುದಾಗಿ ಅವರು ಹೇಳಿದರು. ಸ್ವಾಮಿ ವಿವೇಕಾನಂದ, ಮಹಾತ್ಮಾಗಾಂಧಿ ಮತ್ತು ತೆರೇಸಾ ಅವರನ್ನು ತಮ್ಮ ಆದರ್ಶವ್ಯಕ್ತಿಗಳಾಗಿ ಕಾಣುವುದಾಗಿ ಅವರು ನುಡಿದರು.
ಭಾರತದ ರಕ್ಷಣಾ ಸಚಿವರಾದ ಎ.ಕೆ. ಆಂಟೋನಿ ಕೂಡ ಅವರಿಗೆ ಸ್ಫೂರ್ತಿಯಾಗಿದ್ದಾರೆ. ಸಾರ್ವಜನಿಕ ಸೇವಕ ಹೇಗೆ ಕೆಲಸ ಮಾಡಬಹುದೆಂಬುದಕ್ಕೆ ಆಂಟೋನಿ ಜೀವಂತ ಸಾಕ್ಷಿಯೆಂದು ಅವರು ನುಡಿದಿದ್ದಾರೆ. ಮ್ಯಾಥಿವ್ ಮೆದು ಮಾತಿನ ವಿಶ್ವಾಸಭರಿತ ವ್ಯಕ್ತಿಯಾಗಿದ್ದು, ಮುಂಬೈ ಮೂಲದ ಅವರು ಮುಂಬೈ ವಿವಿಯ ಪದವಿ ಪೂರೈಸಿದ್ದಾರೆ. ಡೆಟ್ರಾಯಿಟ್ ವಿವಿಯ ಎಂಬಿಎ ಡಿಗ್ರಿ ಕೂಡ ಮಾಡಿದ್ದಾರೆ.
ಪ್ರೊ ಟೆಮ್ ಮೇಯರ್ ಹುದ್ದೆಯಲ್ಲಿ ಸ್ಟಾಫರ್ಡ್ ನಿವಾಸಿಗಳಿಗೆ ಸೇವೆ ಸಲ್ಲಿಸುವ ಸದವಕಾಶ ಸಿಕ್ಕಿದೆಯೆಂದು ಅವರು ಹೇಳಿದ್ದಾರೆ. ಸ್ಟಾಫರ್ಡ್ ಆಸ್ತಿ ತೆರಿಗೆಯಿಲ್ಲದ ಟೆಕ್ಸಾಸ್ ಸಿಟಿಯ ಏಕೈಕ ನಗರವೆಂದು ಹೇಳಲಾಗಿದ್ದು, ಇತ್ತೀಚಿನ ಫಾರ್ಚ್ಯುನ್ ನಿಯತಕಾಲಿಕೆಯು ಅಮೆರಿಕದ 40,000 ನಗರಗಳ ಪೈಕಿ ವಾಸಕ್ಕೆ ಮತ್ತು ವ್ಯವಹಾರಕ್ಕೆ ಅತ್ಯುತ್ತಮ ನಗರವೆಂದು ತಿಳಿಸಿದೆ. |