ಪಶ್ಚಿಮ ಇಂಡೊನೇಶಿಯದ ಕಲ್ಲಿದ್ದಲು ಗಣಿಯೊಂದಲ್ಲಿ ಭಾರೀ ಸ್ಫೋಟ ಸಂಭವಿಸಿ ಕನಿಷ್ಠ 28 ಜನರು ಸತ್ತಿದ್ದಾರೆ ಮತ್ತು ಇನ್ನಿತರ 12 ಮಂದಿ ಸಜೀವ ಸಮಾಧಿಯಾಗಿದ್ದಾರೆ. ಹೂತುಹೋದ ಜನರನ್ನು ಬಿಡಿಸಲು ಹತ್ತಾರು ಶೋಧಕರು ಪ್ರಯತ್ನಿಸಿದರು. ಆದರೆ ಜಾರುವ ಕಲ್ಲುಗಳು ಮತ್ತು ಅನಿಲ ಮತ್ತು ಕಲ್ಲಿದ್ದಲು ಅವಶೇಷದ ಮಿಶ್ರಣದಿಂದಾಗಿ ನಾಲ್ಕು ಗಂಟೆಗಳ ಅಗೆತದ ಬಳಿಕ ಅವರು ಹೊರಬಂದಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ಹೂತುಹೋಗಿರುವ ಗಣಿಕಾರ್ಮಿಕರು ಇಷ್ಟರಲ್ಲಿ ಸತ್ತಿರಬಹುದೆಂದು ಅವರು ಹೇಳಿದ್ದಾರೆ. ಸುಮಾತ್ರ ದ್ವೀಪದಲ್ಲಿರುವ ಸುಮಾರು 300 ಅಡಿ ಆಳದ ಗಣಿಯಲ್ಲಿ ಬೆಳಿಗ್ಗೆ ಸ್ಫೋಟ ಸಂಭವಿಸಿದ ಕೂಡಲೇ ನಾಲ್ಕು ದೇಹಗಳನ್ನು ಪತ್ತೆಹಚ್ಚಲಾಯಿತೆಂದು ಅವರು ಹೇಳಿದ್ದಾರೆ. ಮಂಗಳವಾರ ತಂಡಗಳು ಶೋಧಕರಿಗೆ ಉಸಿರಾಡುವುದಕ್ಕಾಗಿ ಗಣಿಯ ದ್ವಾರಕ್ಕೆ ಆಮ್ಲಜನಕವನ್ನು ಪಂಪ್ ಮಾಡಿದ ಬಳಿಕ 8 ಮಂದಿಯನ್ನು ಹೊರಕ್ಕೆ ತೆಗೆಯಲಾಗಿದೆ.
ಶೋಧಕರು 11 ದೇಹಗಳನ್ನು ಪತ್ತೆಹಚ್ಚಿದ್ದು, ಸತ್ತವರ ಸಂಖ್ಯೆ 28ಕ್ಕೇರಿದೆಯೆಂದು ರೋಗ್ಯ ಸಚಿವಾಲಯ ಬಿಕ್ಕಟ್ಟು ಕೇಂದ್ರ ಮುಖ್ಯಸ್ಥ ರುಸ್ತುಮ್ ಪಕಾಯ ಹೇಳಿದ್ದಾರೆ. ಬದುಕುಳಿದ 9 ಮಂದಿಗೆ ಇನ್ನೂ ಚಿಕಿತ್ಸೆ ನೀಡಲಾಗುತ್ತಿದ್ದು, ಅವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಸಿಕ್ಕಿಬಿದ್ದ ಇನ್ನೂ 12 ಮಂದಿಗೆ ಶೋಧ ನಡೆಸಲಾಗುತ್ತಿದೆ. ಸ್ಫೋಟಕ್ಕೆ ಕಾರಣವೇನೆಂದು ತಿಳಿಯಲು ಪೊಲೀಸರು ಯತ್ನಿಸುತ್ತಿದ್ದಾರೆ. ಸೋರಿಕೆಯಾದ ಮಿಥೇನ್ ಅನಿಲದಿಂದ ಸ್ಫೋಟ ಸಂಭವಿಸಿದೆಯೆಂದು ಆರಂಭಿಕ ತನಿಖೆ ತಿಳಿಸಿದೆ. |