ಅಮೆರಿಕ, ಭಾರತ ಮತ್ತು ಪಾಕಿಸ್ತಾನದ ನಡುವೆ ಭಯೋತ್ಪಾದನೆ ನಿಗ್ರಹಕ್ಕೆ ಹೆಚ್ಚಿನ ಸಹಕಾರ ಇರಬೇಕೆಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಹಿಲರಿ ರೋಡ್‌ಹಾಂ ಕ್ಲಿಂಟನ್ ಕರೆ ನೀಡಿದ್ದಾರೆ. ಭಾರತದ ಜತೆ ಬಾಂಧವ್ಯ ಗಟ್ಟಿಗೊಳಿಸಲು ಒಬಾಮಾ ಆಡಳಿತ ನಿರ್ಧರಿಸಿರುವುದರಿಂದ ತಾವು ಭಾರತಕ್ಕೆ ಮುಂದಿನ ತಿಂಗಳು ಭೇಟಿ ನೀಡುವುದಾಗಿ ಅವರು ಹೇಳಿದರು.
ಅಮೆರಿಕ ಭಾರತ ಉದ್ಯಮ ಮಂಡಳಿ ಸಭೆಯಲ್ಲಿ ಮಾತನಾಡುತ್ತಿದ್ದ ಕ್ಲಿಂಟನ್, ರಷ್ಯಾದಲ್ಲಿ ಭಾರತ ಮತ್ತು ಪಾಕಿಸ್ತಾನದ ಮುಖಂಡರ ಭೇಟಿಯನ್ನು ಸ್ವಾಗತಿಸಿದರು.ಭಾರತ ಮತ್ತು ಪಾಕಿಸ್ತಾನದ ನಡುವೆ ಮಾತುಕತೆ ಹಾಗೂ ಉಗ್ರಗಾಮಿಗಳ ವಿರುದ್ಧ ಪಾಕಿಸ್ತಾನದ ಇತ್ತೀಚಿನ ಕಾರ್ಯಾಚರಣೆಯಿಂದ ದಕ್ಷಿಣ ಏಷ್ಯಾದಲ್ಲಿ ಮತ್ತು ಜಗತ್ತಿನಾದ್ಯಂತ ಭದ್ರತೆಗೆ ಚೇತರಿಕೆ ನೀಡುತ್ತದೆಂದು ಅವರು ಹೇಳಿದರು.
ಪಾಕಿಸ್ತಾನದ ಉಗ್ರಗಾಮಿಗಳ ಮೇಲೆ ಆರೋಪ ಹೊರಿಸಲಾದ ಮುಂಬೈ ದಾಳಿಗಳು ನಮ್ಮ ರಾಷ್ಟ್ರಗಳಿಗೆ ಭಯೋತ್ಪಾದನೆ ಸಮಾನ ಬೆದರಿಕೆಯಾಗಿದ್ದು ಅದನ್ನು ಸಮಾನ ಕಾರ್ಯತಂತ್ರದಿಂದ ನಾವು ಎದುರಿಸಬೇಕೆಂಬುದನ್ನು ನೆನಪಿಸುತ್ತದೆಂದು ಅವರು ಹೇಳಿದರು.ಭಾರತ ಮತ್ತು ಪಾಕಿಸ್ತಾನದ ನಡುವೆ ನಾವು ಮಾತುಕತೆ ಬಯಸುತ್ತೇವೆ. ಮಾತುಕತೆಯ ಗತಿ, ಭವಿಷ್ಯ ಮತ್ತು ಸ್ವರೂಪದ ಬಗ್ಗೆ ಉಭಯ ರಾಷ್ಟ್ರಗಳು ಅವರದೇ ಷರತ್ತುಗಳ ಅನ್ವಯ ನಿರ್ಧರಿಸಬೇಕು ಎಂದು ಕ್ಲಿಂಟನ್ ಹೇಳಿದರು. |