ಶ್ರೀಲಂಕಾ ಸೇನೆಯ ಕೈಯಲ್ಲಿ ಸೋಲನುಭವಿಸಿ ಒಂದು ತಿಂಗಳು ಗತಿಸಿದ ಬಳಿಕ, ಎಲ್‌ಟಿಟಿಇನ ಉಳಿದ ಪಳೆಯುಳಿಕೆಗಳು ಪುನರ್‌ಸಂಘಟಿತರಾಗಿ ವಿದೇಶದಿಂದ ಪ್ರತ್ಯೇಕ ತಮಿಳು ರಾಷ್ಟ್ರದ ಗುರಿಗಾಗಿ ಹೋರಾಡಲಿದ್ದು ಬಂಡುಕೋರರ ಅಂತಾರಾಷ್ಟ್ರೀಯ ಸಂಬಂಧಗಳ ಮುಖ್ಯಸ್ಥ ಸೆಲ್ವರಸ ಪದ್ಮನಾಥನ್ ಹೋರಾಟಕ್ಕೆ ಸಾರಥ್ಯ ವಹಿಸಲಿದ್ದಾನೆ. 'ತಮಿಳು ಈಳಂ ಜನರ ಹೋರಾಟ ಹೊಸ ಹಂತಕ್ಕೆ ತಲುಪಿದೆ.
ನಮ್ಮ ಸ್ವಾತಂತ್ರ್ಯದತ್ತ ರಾಜಕೀಯ ಮುನ್ನೋಟದಿಂದ ಮುಂದಿನ ಹೆಜ್ಜೆಗಳನ್ನು ಇಡಲು ಈಗ ಸಕಾಲ' ಎಂದು ಪದ್ಮನಾಥನ್ ಈಮೇಲ್ ಆಡಿಯೊ ಫೈಲ್‌ನಲ್ಲಿ ಹೇಳಿದ್ದು, ಅದು ತಮಿಳು ಸಮುದಾಯ, ಬಿಬಿಸಿ ಮತ್ತು ದಿ ಟೈಮ್ಸ್ ಸೇರಿದಂತೆ ಬ್ರಿಟನ್ ಮಾಧ್ಯಮದ ನಡುವೆ ಹರಿದಾಡಿದೆಯೆಂದು ವರದಿಯಾಗಿದೆ.
ವ್ಯಾಘ್ರಪಡೆಯ ಮುಖ್ಯ ಶಸ್ತ್ರಾಸ್ತ್ರ ಕಳ್ಳಸಾಗಣೆದಾರನ ಪಾತ್ರವಹಿಸಿದ್ದ ಪದ್ಮನಾಥನ್ ಇಂಟರ್‌ಪೋಲ್‌ಗೆ ಬೇಕಾಗಿದ್ದು ಸಂಘಟನೆಯು ಹಿಂಸಾಚಾರ ತ್ಯಜಿಸುತ್ತದೆನ್ನುವ ಬಗ್ಗೆ ಯಾವುದೇ ಇಂಗಿತ ನೀಡಿಲ್ಲವಾದರೂ ತಮಿಳು ಈಳಂನ ಹಂಗಾಮಿ ಅಂತರ್ದೇಶೀಯ ಸರ್ಕಾರದ ಸ್ಥಾಪನೆಯನ್ನು ಪ್ರಕಟಿಸಿದ್ದಾನೆ.
ತನ್ನ ಸಾಗರೋತ್ತರ ಮೂಲದ ಕಾನೂನು ಸಲಹೆಗಾರ ರುದ್ರಕುಮಾರನ್ ವಿಶ್ವನಾಥನ್ ಸಮಿತಿಯೊಂದರ ನೇತೃತ್ವ ವಹಿಸಿ ಪ್ರಜಾಪ್ರಭುತ್ವ ತತ್ವಗಳಡಿ ಮುಂದಿನ ಕ್ರಮದ ಬಗ್ಗೆ ನಿರ್ಧರಿಸಲಾಗುವುದು ಎಂದು ತಿಳಿಸಿದ್ದಾನೆ.
ಶ್ರೀಲಂಕಾದ ಉತ್ತರ ಮತ್ತು ಪೂರ್ವ ಪ್ರದೇಶಗಳಿಗೆ ವ್ಯಾಘ್ರಪಡೆಯಿಂದ ತಮಿಳು ಈಳಂ ಎಂದು ನಾಮಾಂಕಿತವಾಗಿದೆ. ಪದ್ಮನಾಥನ್ ವಿದೇಶದಲ್ಲಿರುವುದರಿಂದ ಸೇನೆ ಕಾರ್ಯಾಚರಣೆಗೆ ಬಲಿಯಾಗಿಲ್ಲವೆನ್ನಲಾಗಿದ್ದು, ಎಲ್ಲಿಂದ ಸಂದೇಶ ಕಳಿಸಿದ್ದಾನೆನ್ನುವುದು ಸ್ಪಷ್ಟವಾಗಿಲ್ಲ ಎಂದು ಮಾಧ್ಯಮದ ವರದಿಗಳು ತಿಳಿಸಿವೆ. ಶ್ರೀಲಂಕಾ ಸರ್ಕಾರ ಹಂಗಾಮಿ ಅಂತರ್ದೇಶಿಯ ಸರ್ಕಾರದ ಮಾತನ್ನು ತಳ್ಳಿಹಾಕಿದ್ದು, ಎಲ್‌ಟಿಟಿಇ ಈಗ ಅಸ್ತಿತ್ವದಲ್ಲೇ ಇಲ್ಲವೆಂದು ತಿಳಿಸಿದೆ.
ಎಲ್‌ಟಿಟಿಇ ಮಿಲಿಟರಿ ಬಲ ಹೊಂದಿದ್ದಾಗಲೂ ಪ್ರತ್ಯೇಕ ರಾಜ್ಯ ಸಾಧನೆ ಸಾಧ್ಯವಾಗಲಿಲ್ಲ. ಈಗ ಹೇಗೆ ರಚಿಸುತ್ತೆಂದು ಪ್ರಶ್ನಿಸಿದೆ. ಎಲ್‌ಟಿಟಿಇ ಪರ ತಮಿಳುನೆಟ್‌ನಲ್ಲಿ ಪದ್ಮನಾಥನ್ ಹೇಳಿಕೆ ಪ್ರಕಟವಾಗಿಲ್ಲ ಮತ್ತು ಬಂಡುಕೋರರ ಪಳೆಯುಳಿಕೆಗಳಿಗೆ ಅವನು ನಿಜವಾಗಲೂ ಉಸ್ತುವಾರಿ ವಹಿಸಿದ್ದಾನೆಯೇ ಎನ್ನುವುದು ಸ್ಪಷ್ಟವಾಗಿಲ್ಲ. |