ದಕ್ಷಿಣ ಪೆಸಿಫಿಕ್ ದ್ವೀಪವೊಂದರ ಮಣ್ಣಿನಲ್ಲಿ ಔಷಧವೊಂದನ್ನು ಪತ್ತೆಹಚ್ಚಲಾಗಿದ್ದು, ವಯಸ್ಸಾಗುವ ಪ್ರಕ್ರಿಯೆಯನ್ನು ತಡೆಯಲು ನೆರವು ನೀಡಬಹುದೆಂದು ಸಂಶೋಧನೆ ತಿಳಿಸಿದೆ. ಅಮೆರಿಕದ ವಿಜ್ಞಾನಿಗಳು ರಾಪಾಮೈಸಿನ್ ಎಂಬ ಹೆಸರಿನ ಈ ಔಷಧಿಯನ್ನು ಇಲಿಗಳ ಮೇಲೆ ಮೊಟ್ಟಮೊದಲಿಗೆ ಪ್ರಯೋಗಿಸಿದ್ದಾರೆ. ವಯಸ್ಸಾದ ಇಲಿಗಳಿಗೆ ರಾಪಾಮೈಸಿನ್ ಚಿಕಿತ್ಸೆ ನೀಡಿದಾಗ ಶೇ.38ರಷ್ಟು ಇಲಿಗಳ ಆಯಸ್ಸು ವೃದ್ಧಿಸಿತು.
ಜರ್ನಲ್ ನೇಚರ್ ಪ್ರಕಟಿಸಿದ ಈ ಸಂಶೋಧನೆಯು ಹಿರಿಯ ವ್ಯಕ್ತಿಗಳಲ್ಲಿ ವೃದ್ಧಾಪ್ಯದ ಪ್ರಕ್ರಿಯೆಗಳನ್ನು ನಿಧಾನಗೊಳಿಸುವ ಸಾಧ್ಯತೆ ಬಗ್ಗೆ ಆಶಾಭಾವನೆ ಚಿಮ್ಮಿಸಿದೆ. ಆದರೆ ಜೀವಿತಾವಧಿಯನ್ನು ಹೆಚ್ಚಿಸುವ ಪ್ರಯತ್ನದಲ್ಲಿ ಈ ಔಷಧಿ ಬಳಕೆ ವಿರುದ್ಧ ಬ್ರಿಟನ್ ತಜ್ಞರೊಬ್ಬರು ಎಚ್ಚರಿಸಿದ್ದು, ಇದರಿಂದ ರೋಗನಿರೋಧಕ ಶಕ್ತಿ ಕುಂದಿಸಬಹುದೆಂದು ಹೇಳಿದ್ದಾರೆ.ವಯಸ್ಸಾಗುವ ಪ್ರಕ್ರಿಯೆಯನ್ನು ಕುಂಠಿತಗೊಳಿಸಿ ಜೀವಿತಾವಧಿಯನ್ನು ಔಷಧಿ ಚಿಕಿತ್ಸೆ ಮೂಲಕ ವಿಸ್ತರಿಬಹುದೆಂಬುದಕ್ಕೆ ಇದು ಪ್ರಥಮ ಮನದಟ್ಟಾದ ಪುರಾವೆಯೆಂದು ನಂಬಲಾಗಿದೆ. ರಾಪಾಮೈಸಿನ್ ಔಷಧಿಯನ್ನು 1970ರಲ್ಲಿ ಈಸ್ಟರ್ ದ್ವೀಪದಲ್ಲಿ ಪತ್ತೆಹಚ್ಚಲಾಯಿತು.
ಅಂಗಾಂಗ ಕಸಿ ರೋಗಿಗಳಿಗೆ ಅಂಗಾಂಗ ನಿರಾಕಕರಣೆ ತಪ್ಪಿಸಲು ಇದನ್ನು ಈಗಾಗಲೇ ಬಳಸಲಾಗಿದೆ. ಕ್ಯಾನ್ಸರ್‌ಗೆ ಸಂಭವನೀಯ ಚಿಕಿತ್ಸೆಯೆಂದು ಕೂಡ ಇದನ್ನು ಪರಿಗಣಿಸಲಾಗಿದೆ. ಟೆಕ್ಸಾಸ್, ಮಿಚಿಗಾನ್ ಮತ್ತು ಮೈನೆಯ ಸಂಶೋಧಕರು ಮಾನವರಿಗೆ 60 ವರ್ಷ ವಯಸ್ಸಿಗೆ ಸಮಾನವಾದ ವಯಸ್ಸಿನ ಇಲಿಗಳಿಗೆ ಔಷಧಿಯನ್ನು ಪ್ರಯೋಗಿಸಿದರು. ರಾಪಾಮೈಸಿನ್ ಪ್ರಾಣಿಗಳ ನಿರೀಕ್ಷಿತ ಜೀವಿತಾವಧಿಯನ್ನು ಶೇ.28ರಿಂದ ಶೇ.38ಕ್ಕೆ ಹೆಚ್ಚಿಸಿತು. ತಾವು ವಯಸ್ಸಾಗುವ ಪ್ರಕ್ರಿಯೆ ಕುರಿತು 35 ವರ್ಷಗಳಿಂದ ಸಂಶೋಧನೆ ನಡೆಸುತ್ತಿದ್ದು, ನನ್ನ ಜೀವಿತಾವಧಿಯಲ್ಲಿ ವಯಸ್ಸಾಗುವ ಪ್ರಕ್ರಿಯೆ ನಿಗ್ರಹ ಮಾತ್ರೆಯನ್ನು ಪತ್ತೆಮಾಡುತ್ತೇವೆಂದು ಕನಸಲ್ಲೂ ಎಣಿಸಿರಲಿಲ್ಲ.
ಆದರೆ ರಾಪಾಮೈಸಿನ್ ಈ ಬಗ್ಗೆ ಸಾಕಷ್ಟು ಭರವಸೆ ಮೂಡಿಸಿದೆಯೆಂದು ಸಂಶೋಧಕ ಡಾ. ಆರ್ಲಾನ್ ರಿಚರ್ಡ್‌ಸನ್ ಅವರು ಹೇಳಿದ್ದಾರೆ.ಆದರೆ ರಾಪಾಮೈಸಿನ್ ಔಷಧಿಯನ್ನು ಜೀವಿತಾವಧಿ ಹೆಚ್ಚಿಸಲು ಬಳಸುವ ಬಗ್ಗೆ ಟೆಕ್ಸಾಸ್ ಆರೋಗ್ಯ ವಿಜ್ಞಾನ ಕೇಂದ್ರದ ವಿವಿಯ ಪ್ರಾಧ್ಯಾಪಕ ರಾಂಡಿ ಸ್ಟ್ರಾಂಗ್ ಎಚ್ಚರಿಸಿದ್ದು, ರಾಪಾಮೈಸಿನ್ ರೋಗನಿರೋಧಕ ಶಕ್ತಿ ಕುಂದಿಸಬಹುದೆಂದು ಹೇಳಿದ್ದಾರೆ. |