ಜಾಗತಿಕ ತಾಪಮಾನ ಮಿತಿಯಲ್ಲಿಡುವ ಮೂಲಕ ಹವಾಮಾನ ಬದಲಾವಣೆ ಸ್ಥಗಿತಗೊಳಿಸುವತ್ತ ಜಗತ್ತು ದಾಪುಗಾಲಿಡುತ್ತಿದೆಯೆಂದು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಗುರುವಾರ ತಿಳಿಸಿದ್ದಾರೆ. ಆದರೆ ವಿಶ್ವಸಂಸ್ಥೆ ಮುಖ್ಯಸ್ಥ ಬಾನ್ ಕಿ ಮೂನ್ ಈ ದಿಸೆಯಲ್ಲಿ ಪ್ರಯತ್ನ ಸಾಕಷ್ಟು ಮಾಡಿಲ್ಲವೆಂದು ಹೇಳಿದ್ದಾರೆ. ಇದು ರಾಜಕೀಯವಾಗಿ ಮತ್ತು ನೈತಿಕವಾಗಿ ಕಡ್ಡಾಯವಾಗಿದ್ದು, ಮಾನವಪೀಳಿಗೆಯ ಮತ್ತು ಭೂಲೋಕದ ಭವಿಷ್ಯಕ್ಕಾಗಿ ಐತಿಹಾಸಿಕ ಜವಾಬ್ದಾರಿ ಎಂದು ಬಾನ್ ಹೇಳಿದ್ದಾರೆ.ಇಟಲಿಯಲ್ಲಿ ಭೇಟಿಯಾಗಿರುವ ಪ್ರಮುಖ ಆರ್ಥಿಕ ಶಕ್ತಿಗಳು ಜಾಗತಿಕ ತಾಪಮಾನವನ್ನು 2 ಡಿಗ್ರಿ ಸೆಲ್ಸಿಯಸ್‌ಗೆ ಸೀಮಿತಗೊಳಿಸಲು ಒಪ್ಪಿಕೊಂಡಿದ್ದು, ಒಬಾಮಾ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗುವುದಕ್ಕೆ ಮುಂಚೆ 12 ತಿಂಗಳ ಹಿಂದೆ ಊಹಿಸಲಾಗದ ಬೆಳವಣಿಗೆ ಈಗ ಉಂಟಾಗಿದೆ.2050 ರೊಳಗೆ ಹಸಿರುಮನೆ ಅನಿಲವನ್ನು ಶೇ.50ರಷ್ಟು ತಗ್ಗಿಸುವ ಯೋಜನೆಯಲ್ಲಿ ಚೀನಾ ಮತ್ತು ಭಾರತ ಸೇರುವಂತೆ ಮನವೊಲಿಸುವಲ್ಲಿ ಜಿ-8 ರಾಷ್ಟ್ರಗಳು ವಿಫಲವಾಗಿದೆ. ಇದರಿಂದಾಗಿ ಈ ವರ್ಷಾಂತ್ಯದಲ್ಲಿ ಹೊಸ ವಿಶ್ವಸಂಸ್ಥೆ ಒಪ್ಪಂದದ ಪ್ರಯತ್ನಗಳಿಗೆ ಪೆಟ್ಟು ಬಿದ್ದಿದೆ. 2050ರೊಳಗೆ ಹಸಿರುಮನೆ ಅನಿಲ ಹೊಮ್ಮುವಿಕೆಯನ್ನು ಶೇ.80ರಷ್ಟು ಕಡಿತಗೊಳಿಸುವ ಜಿ-8 ರಾಷ್ಟ್ರಗಳ ಗುರಿಗೆ ಅದನ್ನು ಪ್ರಕಟಿಸಿದ ಕೇವಲ ಒಂದು ಗಂಟೆಯಲ್ಲೇ ಕೆನಡಾ ಮತ್ತು ರಷ್ಯಾ ಕೂಡ ಬೆನ್ನುತಿರುಗಿಸಿದಂತೆ ಕಾಣುತ್ತಿದೆ.ಜಿ-8 ರಾಷ್ಟ್ರಗಳ ನಾಯಕರ ತಮ್ಮ ಪ್ರಥಮ ಸಭೆಯಲ್ಲಿ ರಾಷ್ಟ್ರವು ಹಸಿರುಮನೆ ಅನಿಲ ಹೊರಹೊಮ್ಮುವಿಕೆ ಬಗ್ಗೆ ಜವಾಬ್ದಾರಿಯಿಂದ ನುಣುಚಿಕೊಳ್ಳುವ ದಿನಗಳು ಮುಗಿದಿವೆಯೆಂದು ಒಬಾಮಾ ಎಚ್ಚರಿಸಿದ್ದರು. ಹಿಮದ ಪದರಗಳು ಕರಗುತ್ತಿವೆ, ಸಮುದ್ರಮಟ್ಟ ಏರುತ್ತಿದೆ, ಸಾಗರಗಳು ಹೆಚ್ಚು ಆಮ್ಲೀಕರಣವಾಗುತ್ತಿದೆ. ಹವಾಮಾನದಲ್ಲಿ, ಆಹಾರ ಮತ್ತು ನೀರಿನ ಮೂಲಗಳಲ್ಲಿ ಇದರ ಪರಿಣಾಮಗಳು ಗೋಚರಿಸಿವೆಯೆಂದು ಅವರು ಹೇಳಿದ್ದರು. |