ಭಾರತೀಯ ಮೂಲದ, ಯುವ ಕಾರ್ಯನಿರ್ವಾಹಕ ಅಧಿಕಾರಿಯೊಬ್ಬರು ದುಬಾರಿ ಲಂಡನ್ ರೆಸ್ಟೊರೆಂಟಿನ 8ನೇ ಮಹಡಿಯ ಮೇಲಿನಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡ್ಯುಟ್ಸ್‌ಚೆ ಬ್ಯಾಂಕಿನಲ್ಲಿ ತಮ್ಮ ಕೆಲಸ ಕಳೆದುಕೊಳ್ಳುವ ಬಗ್ಗೆ ಕಳವಳಕ್ಕೀಡಾಗಿದ್ದ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆಂದು ಹೇಳಲಾಗಿದೆ.
ಗುರುವಾರ ತಮ್ಮ 25ನೇ ಹುಟ್ಟುಹಬ್ಬ ಆಚರಿಸಿಕೊಳ್ಳಬೇಕಿದ್ದ ಮತ್ತು ಮುಂದಿನ ಬ್ರಿಟಿಷ್ ಏಷ್ಯನ್ ಉದ್ಯಮಿಯೆಂದು ಭರವಸೆ ಇಟ್ಟುಕೊಂಡಿದ್ದ ಅಂಜೂಲ್ ಮಾಲ್ಡೆಯ ಅನಿರೀಕ್ಷಿತ ಸಾವು ನಗರಕ್ಕೆ ಆಘಾತ ಉಂಟುಮಾಡಿದೆ. ಕಾಕ್ ಡಿ ಆರ್ಜೆಂಟ್ ರೆಸ್ಟೊರೆಂಟ್‌ನಲ್ಲಿ ಭಾನುವಾರ ಮಾಲ್ದೆ ಸಾವಿನ ಕೂಪಕ್ಕೆ ಬಿದ್ದಾಗ ಹೂಗೊ ಬಾಸ್ ಸೂಟ್ ಧರಿಸಿದ್ದರು ಮತ್ತು ಚಂಪಾಗ್ನೆ ಗ್ಲಾಸ್ ಕೈಯಲ್ಲಿ ಹಿಡಿದಿದ್ದರು.
ಪ್ರಶಸ್ತಿ ವಿಜೇತ ಆಕ್ಸ್‌ಫರ್ಡ್ ವಿವಿ ಪದವೀಧರ, ಉದ್ಯಮಿ, ಮಾಜಿ ಪತ್ರಕರ್ತ ಮತ್ತು ಸಂಗೀತಕಾರರಾಗಿದ್ದ ಮಾಲ್ಡೆ ಅದ್ಭುತ ವೃತ್ತಿಜೀವನದತ್ತ ಮುನ್ನಡೆದಿದ್ದರೆಂದು ಡೇಲಿ ಮೇಲ್ ತಿಳಿಸಿದೆ. ಜಾಗತಿಕ ಮಾರುಕಟ್ಟೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಅವರ ಕಂಪ್ಯೂಟರ್ ಬಳಕೆಯನ್ನು ಕುರಿತು ತನಿಖೆ ನಡೆಸಿದ ಬಳಿಕ ಅವರನ್ನು ಡೆಸ್ಕ್‌ನಲ್ಲಿ ಕೆಲಸ ಮಾಡದಂತೆ ಸೂಚಿಸಲಾಗಿತ್ತು. ಅವರನ್ನು ಅಮಾನತು ಅಥವಾ ವಜಾ ಮಾಡಿರದಿದ್ದರೂ ಈ ಘಟನೆಯು ಮಾಲ್ಡೆ ಜೀವನದ ಹಿನ್ನಡೆಯ ಸಂಕೇತವೆಂದು ಹೇಳಲಾಗಿತ್ತು. |