ಉತ್ತರ ಐರ್ಲೆಂಡ್ ಬಿಟ್ಟು ಹೋಗಿ ಅಥವಾ ಬಾಂಬ್ ದಾಳಿಗಳನ್ನು ಎದುರಿಸುವಂತೆ ಪ್ರೊಟೆಸ್ಟೆಂಟ್ ಉಗ್ರವಾದಿಗಳಿಂದ ಇಲ್ಲಿನ ಬೆಲ್‌ಫಾಸ್ಟ್‌ನಲ್ಲಿರುವ ಭಾರತೀಯ ಸಮುದಾಯ ಕೇಂದ್ರಕ್ಕೆ ಬೆದರಿಕೆ ಪತ್ರವೊಂದು ತಲುಪಿದೆ. ಉಸ್ಟರ್ ರಕ್ಷಣಾ ಸಂಘಟನೆಯ ಯುವದಳದಿಂದ ಜನಾಂಗೀಯ ಹಿಂಸಾಚಾರದ ಬೆದರಿಕೆಯನ್ನು ಪತ್ರದಲ್ಲಿ ಬರೆಯಲಾಗಿದ್ದು, ವಿದೇಶಿಯರ ಬಗ್ಗೆ ನಮಗೆ ಸಹಾನುಭೂತಿಯಿಲ್ಲ.
ಜುಲೈ 11ರ ಉತ್ಸವಾಗ್ನಿ ಅಥವಾ ಜು.12ರ ಪರೇಡ್ ದಿನಕ್ಕೆ ಮುಂಚಿತವಾಗಿ ನಮ್ಮ ರಾಣಿಯ ರಾಷ್ಟ್ರದಿಂದ ತೊಲಗುವಂತೆ ಅವರು ಬೆದರಿಕೆ ಹಾಕಿದ್ದಾರೆ. ಇಲ್ಲದಿದ್ದರೆ ನಿಮ್ಮ ಕಟ್ಟಡ ಸ್ಫೋಟಿಸಲಾಗುವುದು. ಉತ್ತರ ಐರ್ಲೆಂಡ್ ಬಿಳಿಯ ಬ್ರಿಟಿಷರಿಗೆ ಮಾತ್ರವೆಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.
ಜನಾಂಗೀಯ ದ್ವೇಷದ ಅಪರಾಧಗಳು ಇತ್ತೀಚಿನ ವರ್ಷಗಳಲ್ಲಿ ಉತ್ತರ ಐರ್ಲೆಂಡ್‌ನಲ್ಲಿ ಏಕಪ್ರಕಾರವಾಗಿ ಹೆಚ್ಚಿದ್ದು, ಹಲ್ಲೆಗಳು, ಕಿರುಕುಳ, ದರೋಡೆ ಘಟನೆಗಳು ಉಲ್ಬಣಿಸಿವೆಯೆಂದು ಜನಾಂಗೀಯ ಅಲ್ಪಸಂಖ್ಯಾತರ ಮಂಡಳಿಯ ಎಕ್ಸಿಕ್ಯೂಟಿವ್ ನಿರ್ದೇಶಕ ಪ್ಯಾಟ್ರಿಕ್ ಯು ತಿಳಿಸಿದ್ದಾರೆ.
ಬೆಲ್‌ಫಾಸ್ಟ್‌ನಲ್ಲಿ ಉದ್ಯಮಿಗಳು ಮತ್ತು ವೃತ್ತಿಪರರಿಂದ ಕೂಡಿದ ಸಣ್ಣ ಸಮುದಾಯದ ಭಾರತೀಯರಿದ್ದು, ಕೆಲವು ಭಾರತೀಯ ಐಟಿ ಕಂಪೆನಿಗಳು ಕೂಡ ಬೆಲ್‌ಫಾಸ್ಟ್ ಮತ್ತಿತರ ಉತ್ತರ ಐರ್ಲೆಂಡ್ ನಗರಗಳಲ್ಲಿ ನೆಲೆಹೊಂದಿವೆ.
ಬೆಲ್‌ಫಾಸ್ಟ್‌ನಲ್ಲಿ ಭಾರತೀಯ ಕೇಂದ್ರವು ಸ್ವಯಂಸೇವಾ ಸಂಘಟನೆಯಾಗಿದ್ದು, ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯಗಳ ಹೆಚ್ಚಿನ ತಿಳಿವಳಿಕೆ ಮತ್ತು ಪ್ರವರ್ತನೆಗೆ ಕೇಂದ್ರ ಕೆಲಸ ಮಾಡುತ್ತಿದೆ. ಆಸ್ಟ್ರೇಲಿಯದಲ್ಲಿ ಜನಾಂಗೀಯ ದ್ವೇಷದ ದಾಳಿಗಳು ಹೆಚ್ಚುತ್ತಿರುವ ನಡುವೆ ಉತ್ತರ ಐರ್ಲೆಂಡ್‌ನಲ್ಲಿ ಕೂಡ ಜನಾಂಗೀಯ ದ್ವೇಷದ ಬಿಸಿ ತಟ್ಟುತ್ತಿದೆ. |