ಆಫ್ಘಾನಿಸ್ತಾನದಲ್ಲಿ ಭಾರತದ ಕಟ್ಟಡ ನಿರ್ಮಾಣ ಕಂಪೆನಿಯೊಂದರ ಮೇಲೆ ತಾಲಿಬಾನ್ ನಡೆಸಿದ ದಾಳಿಯಲ್ಲಿ 18 ಜನರು ದಾರುಣವಾಗಿ ಸತ್ತಿದ್ದು ಅವರಲ್ಲಿ 6 ಮಂದಿ ಭಾರತೀಯ ಪೌರರೂ ಸೇರಿದ್ದಾರೆಂದು ಪಾಕಿಸ್ತಾನ ಟಿವಿ ಸುದ್ದಿಚಾನೆಲ್ ತಿಳಿಸಿದೆ. ಪಾಕ್ಟಿಯ ಪ್ರಾಂತ್ಯದಲ್ಲಿ ಶುಕ್ರವಾರ ರಾತ್ರಿ ನಡೆದ ದಾಳಿಗೆ ತಾನೇ ಹೊಣೆಯೆಂದು ಆಫ್ಘನ್ ತಾಲಿಬಾನ್ ಹೇಳಿದ್ದು, ಈ ದಾಳಿಯಲ್ಲಿ ಸುಮಾರು 20 ಜನರು ಗಾಯಗೊಂಡಿದ್ದಾರೆಂದು ಟಿವಿ ನ್ಯೂಸ್ ಚಾನೆಲ್ ವರದಿ ಮಾಡಿದೆ.
ಈ ದಾಳಿಯಲ್ಲಿ 6 ಮಂದಿ ಭಾರತೀಯ ಕಾರ್ಮಿಕರು ಮತ್ತು 10 ಮಂದಿ ತಾಲಿಬಾನಿಗಳು ಹತರಾಗಿದ್ದಾರೆಂದು ಪೊಲೀಸರು ತಿಳಿಸಿದ್ದಾಗಿ ಚಾನೆಲ್ ವರದಿ ಮಾಡಿದೆ. ಹತರಾದ 18 ಮಂದಿಯಲ್ಲಿ ಭಾರತೀಯ, ಆಫ್ಘನ್ ಮತ್ತು ಆಫ್ರಿಕನ್ ಪೌರರು ಸೇರಿದ್ದಾರೆಂದು ಹೆಸರುಹೇಳದ ಆಫ್ಘನ್ ತಾಲಿಬಾನ್ ವಕ್ತಾರ ಹೇಳಿದ್ದಾಗಿ ಚಾನೆಲ್ ವರದಿ ಮಾಡಿದೆ. ಈ ಘಟನೆಯ ಬಗ್ಗೆ ಅಧಿಕೃತ ದೃಢೀಕರಣ ನೀಡಲಾಗಿಲ್ಲ.
ದಾಳಿಯ ಬಗ್ಗೆ ಚಾನೆಲ್ ವಿಡಿಯೊ ಚಿತ್ರವನ್ನು ಪ್ರಸಾರ ಮಾಡಿದ್ದು, ತಾಲಿಬಾನ್ ವಿಡಿಯೊ ಚಿತ್ರವನ್ನು ಚಾನೆಲ್‌ಗೆ ಒದಗಿಸಿದೆಯೆಂದು ಹೇಳಿದೆ. ವಿಡಿಯೊ ಚಿತ್ರದಲ್ಲಿ ಎಕೆ-47 ಬಂದೂಕುಗಳನ್ನು ಮತ್ತು ರಾಕೆಟ್ ಲಾಂಚರ್‌ಗಳೊಂದಿಗೆ ಶಸ್ತ್ರಸಜ್ಜಿತರಾದ ಅನೇಕ ಜನರು ಚಿತ್ರದಲ್ಲಿ ತೋರಿಸಿರದ ಗುರಿಯೊಂದರ ಮೇಲೆ ದಾಳಿ ಮಾಡಿದೆ. ಬಂದೂಕುಧಾರಿಗಳು ಗುಂಡು ಹಾರಿಸುತ್ತಿದ್ದಂತೆ ಸ್ಫೋಟ ಮತ್ತು ಬೆಂಕಿಯ ಜ್ವಾಲೆ ಭುಗಿಲೆದ್ದಿದ್ದನ್ನು ವಿಡಿಯೊದ ಅಸ್ಪಷ್ಟ ಚಿತ್ರ ತೋರಿಸಿದೆ.
ಭಾರತದ ಕಟ್ಟಡ ನಿರ್ಮಾಣ ಕಂಪೆನಿಯು ಅಮೆರಿಕ ಕಂಪೆನಿಯ ಸಹಾಯಕ ಸಂಸ್ಥೆಯೆಂದು ತಾಲಿಬಾನ್ ವಕ್ತಾರ ಚಾನೆಲ್‌ಗೆ ತಿಳಿಸಿದ್ದು, ಇಸ್ಲಾಮಿಕ್ ವಿರೋಧಿ ಚಟುವಟಿಕೆಯ ಕೇಂದ್ರವಾಗಿದ್ದರಿಂದ ಅದರ ಮೇಲೆ ದಾಳಿ ಮಾಡಲಾಯಿತೆಂದು ಹೇಳಿದ್ದಾನೆ. ಖೋಸ್ಟ್ ಮತ್ತು ಪಾಕ್ಟಿಯ ಪ್ರಾಂತ್ಯಗಳ ನಡುವೆ ಅಮೆರಿಕ ನೆರವಿನ ರಸ್ತೆಯನ್ನು ಕಂಪೆನಿ ನಿರ್ಮಿಸುತ್ತಿತ್ತೆಂದು ಹೇಳಲಾಗಿದೆ. ತಾಲಿಬಾನ್ ಪಾಕ್ಟಿಯ ಪ್ರಾಂತ್ಯದ ರಾಜಧಾನಿ ಗಾರ್ಡೆಜ್‌ನಲ್ಲಿ ಕರಪತ್ರಗಳನ್ನು ಹಂಚಿದೆಯೆಂದು ವರದಿಯಾಗಿದ್ದು, ಆಫ್ಘಾನಿಸ್ತಾನ ಮತ್ತು ಪಾಕಿಸ್ತಾನದಲ್ಲಿ ಇಸ್ಲಾಂ ವಿರೋಧಿ ಚಟುವಟಿಕೆಯಲ್ಲಿ ನಿರತವಾದ ಸಂಸ್ಥೆಗಳ ಮೇಲೆ ಇನ್ನಷ್ಟು ದಾಳಿಗಳನ್ನು ಮಾಡುವುದಾಗಿ ಎಚ್ಚರಿಸಿದ್ದಾಗಿ ಚಾನೆಲ್ ತಿಳಿಸಿದೆ. |