ಪಾಕಿಸ್ತಾನದ ಸ್ವಾಟ್ ಜಿಲ್ಲೆಯಲ್ಲಿ ತಾಲಿಬಾನ್ ಉಗ್ರಗಾಮಿಗಳ ನಾಯಕ ಮೌಲಾನಾ ಫಜಲುಲ್ಲಾ ತೀವ್ರವಾಗಿ ಗಾಯಗೊಂಡಿದ್ದು ಸಾವಿನ ಅಂಚಿನಲ್ಲಿದ್ದಾನೆಯೆಂದು ಬಿಬಿಸಿ ವರದಿ ಮಾಡಿದೆ. ಹಿರಿಯ ಸರ್ಕಾರಿ ಅಧಿಕಾರಿಗಳು ಮತ್ತು ಭದ್ರತಾ ಅಧಿಕಾರಿಗಳ ಹೇಳಿಕೆಗಳು ಮೌಲಾನಾ ಫಜಲುಲ್ಲಾ ಕುರಿತ ಮಾಹಿತಿ ದೃಢೀಕರಿಸಿದೆ. ಗ್ರಾಮದ ಮಾಜಿ ಧರ್ಮಗುರುವಾಗಿದ್ದ ಫಜಲುಲ್ಲಾ ತಾಲಿಬಾನ್ ಆಂದೋಳನದ ಶಾಖೆಯನ್ನು ಸಂಸ್ಥಾಪಿಸಿದ ಬಳಿಕ ಕ್ರಮೇಣ ತಾಲಿಬಾನ್ ಶಾಖೆಯು ಸ್ವಾಟ್ ಕಣಿವೆಯಲ್ಲಿ ಕರಾಳ ಹಸ್ತ ಚಾಚಿತು.
ಮೌಲಾನಾ ಫಜಲುಲ್ಲಾ ಹೃದಯಭಾಗವಾದ ವಾಯವ್ಯ ಪಾಕಿಸ್ತಾನದಲ್ಲಿ ಬಿಬಿಸಿ ಸಂಗ್ರಹಿಸಿದ ಸಂದರ್ಶನಗಳಲ್ಲಿ ಮೌಲಾನಾ ಫಜಲುಲ್ಲಾ ತೀವ್ರವಾಗಿ ಗಾಯಗೊಂಡಿದ್ದಾನೆಂಬ ವಿಷಯ ಬಹಿರಂಗಗೊಂಡಿದೆ. ಮೌಲಾನಾ ಫಜಲುಲ್ಲಾ ಎರಡು ವೈಮಾನಿಕ ದಾಳಿಗಳಿಂದ ಗಂಭೀರವಾಗಿ ಗಾಯಗೊಂಡಿದ್ದಾನೆಂದು ವೈಯಕ್ತಿಕ ಭದ್ರತಾ ಕಾರಣಗಳಿಗಾಗಿ ತನ್ನ ನೈಜ ಹೆಸರನ್ನು ಬಹಿರಂಗಪಡಿಸದ ಮಿಂಗೋರಾ ನಿವಾಸಿ ವಾಸಿಫ್ ಅಲಿ ಬಿಬಿಸಿಗೆ ತಿಳಿಸಿದ್ದಾರೆ.
ಫಜಲುಲ್ಲಾ ಇಮಾನ್ ಡೆಹ್ರಿ ಬಳಿ ತಂಗಿದ್ದು, ಯಾವುದೇ ರೀತಿಯ ವೈದ್ಯಕೀಯ ನೆರವು ಸಿಗದೇ ಸಾವಿನ ಅಂಚಿನಲ್ಲಿದ್ದಾನೆಂದು ಅವರು ತಿಳಿಸಿದ್ದರು. ವಾಸಿಫ್ ಅಲಿ ಉಗ್ರಗಾಮಿಗಳ ಜತೆ ನಿಕಟ ಸಂಬಂಧ ಹೊಂದಿದ್ದು, ಅವರ ಚಲನವಲನಗಳ ಬಗ್ಗೆ ಸೂಕ್ಷ್ಮ ನಿಗಾ ವಹಿಸುತ್ತಿದ್ದರೆಂದು ಹೇಳಲಾಗಿದೆ.ಇನ್ನೊಬ್ಬ ಹಿರಿಯ ತಾಲಿಬಾನ್ ನಾಯಕ ಶಾ ಡುರಾನ್ ಕೂಡ ವೈಮಾನಿಕ ದಾಳಿಯಲ್ಲಿ ಸತ್ತಿರುವುದಾಗಿ ಅವರು ದೃಢಪಡಿಸಿದ್ದಾರೆ.
ಸ್ಥಳೀಯರ ಜತೆ ಸಂದರ್ಶನಗಳಲ್ಲಿ ಕೂಡ ಮೌಲಾನಾ ಫಜಲುಲ್ಲಾ ತೀವ್ರವಾಗಿ ಗಾಯಗೊಂಡಿರುವ ವಿಷಯ ಬಹಿರಂಗವಾಗಿದೆ. ಮೌಲಾನಾ ಫಜಲುಲ್ಲಾ ಸ್ವಾಟ್‌ನಲ್ಲಿ ಅತ್ಯಂತ ಪ್ರಭಾವಶಾಲಿ ವ್ಯಕ್ತಿಯಾಗಿದ್ದು ತನ್ನ ಸಂದೇಶಗಳನ್ನು ಬಿತ್ತರಿಸಲು ರೇಡಿಯೊ ಕೇಂದ್ರವೊಂದನ್ನು ಕೂಡ ನಡೆಸುತ್ತಿದ್ದ. ಈ ಪ್ರದೇಶದಲ್ಲಿ ಇಸ್ಲಾಮಿಕ್ ಷರಿಯತ್ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿ ಮಾಡಲು ಅವನು ಕರೆ ಮಾಡಿದ್ದ. ತಾಲಿಬಾನ್ ಶಾಂತಿ ಒಪ್ಪಂದ ಮುರಿದಿದ್ದರಿಂದ ಕಳೆದ ಏಪ್ರಿಲ್‌ನಲ್ಲಿ ಪಾಕಿಸ್ತಾನದ ಸೇನೆಯು ತಾಲಿಬಾನ್ ವಿರುದ್ಧ ಕಾರ್ಯಾಚರಣೆ ಆರಂಭಿಸಿದೆ. |