ಉರುಂಕಿಯಲ್ಲಿ ಸಂಭವಿಸಿದ ಕಗ್ಗೊಲೆ ಮತ್ತು ಹತ್ಯೆಯಲ್ಲಿ ಭಾಗಿಯಾದವರ ವಿರುದ್ಧ ಚೀನಾ ಕಿಡಿಕಾರಿದ್ದು, ದುಷ್ಕರ್ಮಿಗಳು ಭಯೋತ್ಪಾದಕ ಗುಂಪುಗಳಿಗೆ ಸೇರಿದ ಸದಸ್ಯರಾಗಿದ್ದು, ಅಲ್ ಖಾಯಿದಾ ಜತೆ ಸಂಪರ್ಕ ಹೊಂದಿದ್ದಾರೆಂದು ತಿಳಿಸಿದೆ. ಈ ನಂಟನ್ನು ಮತ್ತು ಗಲಭೆಕೋರರಿಗೆ ವಿದೇಶಿ ನೆಲೆಗಳಿಂದ ಬೆಂಬಲಿಸುತ್ತಿದ್ದ ಜನರನ್ನು ಪತ್ತೆಹಚ್ಚಲು ವಿದೇಶಿ ಸರ್ಕಾರಗಳ ಸಹಕಾರವನ್ನು ಚೀನಾ ಕೋರಿದೆ.
ತುರ್ತಾಗಿ ಕರೆದ ಕಮ್ಯುನಿಸ್ಟ್ ಪಕ್ಷದ 9 ಸದಸ್ಯರ ಪಾಲಿಟ್‌ಬ್ಯುರೊ ಸಭೆಯಲ್ಲಿ ಈ ವಿಷಯ ಪ್ರಸ್ತಾಪವಾಯಿತು.ಪಕ್ಷದ ಪ್ರಧಾನಕಾರ್ಯದರ್ಶಿ ಮತ್ತು ಚೀನದ ಅಧ್ಯಕ್ಷ ಹು ಜಿಂಟಾವೊ ರೋಮ್ ಶೃಂಗಸಭೆಯಿಂದ ನಿರ್ಗಮಿಸಿ, ಉರುಂಕಿಯ ಬಿಕ್ಕಟ್ಟಿನ ಕುರಿತು ಗಮನಹರಿಸಿದ್ದಾರೆ. ಗಲಭೆಯಲ್ಲಿ ಮುಖಂಡರಿಂದ ದಾರಿತಪ್ಪಿದವರಿಗೆ ಕ್ಷಮೆ ನೀಡುವ ಗಮನಾರ್ಹ ರಾಜಕೀಯ ನಿರ್ಧಾರವನ್ನು ಪಾಲಿಟ್‌ಬ್ಯುರೊ ತೆಗೆದುಕೊಂಡಿದೆ.
ಅದೇ ಸಂದರ್ಭದಲ್ಲಿ ಈ ಘಟನೆಯನ್ನು ಯೋಜಿಸಿದ, ಸಂಘಟಿಸಿದ ಕಟ್ಟಾವಾದಿ ಶಕ್ತಿಗಳಿಗೆ ತೀವ್ರ ಶಿಕ್ಷೆ ವಿಧಿಸಬೇಕೆಂದು ಪಾಲಿಟ್‌ಬ್ಯೂರೊ ಸಲಹೆ ಮಾಡಿತು. ಇರಾಕಿ ಗಲಭೆಕೋರರಿಗೆ ಅಲ್ ಖಾಯಿದಾ ಸೇರಿದಂತೆ ವಿದೇಶಿ ರಾಷ್ಟ್ರಗಳಲ್ಲಿ ನೆಲೆಹೊಂದಿರುವ ಭಯೋತ್ಪಾದಕ ಗುಂಪುಗಳ ಜತೆ ಸಖ್ಯವಿದೆಯೆನ್ನುವುದಕ್ಕೆ ಸರ್ಕಾರದ ಬಳಿ ಸಾಕ್ಷ್ಯಾಧಾರವಿದೆಯೆಂದು ಚೀನಾದ ವಿದೇಶಾಂಗ ಸಚಿವರ ವಕ್ತಾರ ಕಿನ್ ಗಾಂಗ್ ತಿಳಿಸಿದರು. |