ಆಫ್ಘನ್ ತಾಲಿಬಾನ್ ಮುಖಂಡ ಮುಲ್ಲಾ ಮಹಮದ್ ಓಮರ್ ಜತೆ ಸಂಪರ್ಕ ಹೊಂದಿರುವುದನ್ನು ಪಾಕಿಸ್ತಾನ ಸೇನೆ ಸ್ವತಃ ಒಪ್ಪಿಕೊಂಡಿದೆ. ಭಾರತದ ಜತೆ ತನ್ನ ವಿವಾದಗಳನ್ನು ಅಮೆರಿಕ ಸೂಕ್ತವಾಗಿ ನಿಭಾಯಿಸಿದರೆ ಅಮೆರಿಕದ ಜತೆ ಮಾತುಕತೆ ಮೇಜಿಗೆ ತಾಲಿಬಾನ್ ಮುಖಂಡನನ್ನು ಕರೆತರುವುದಾಗಿ ಸೇನೆ ತಿಳಿಸಿದೆ.
ಮಿಲಿಟರಿಯು ತಾಲಿಬಾನ್ ಕಮಾಂಡರ್‌ಗಳಾದ ಮುಲ್ಲಾ ಓಮರ್, ಜಲಾಲ್ಲದ್ದೀನ್ ಹಕ್ಕಾನಿ, ಮುಲ್ಲಾ ನಜೀರ್ ಮತ್ತು ಹಿಜ್ಬೆ ಇಸ್ಲಾಮಿಯ ಗುಲ್ಬುದ್ದೀನ್ ಹೆಕ್‌ಮತ್ಯಾರ್ ಜತೆ ಇನ್ನೂ ಸಂಪರ್ಕ ಹೊಂದಿರುವುದಾಗಿ ಪಾಕಿಸ್ತಾನ ಮಿಲಿಟರಿಯ ಮುಖ್ಯ ವಕ್ತಾರ ಮೇ.ಜನರಲ್ ಅಥಾರ್ ಅಬ್ಬಾಸ್ ಸಂದರ್ಶನವೊಂದರಲ್ಲಿ ತಿಳಿಸಿದ್ದಾಗಿ ಸಿಎನ್‌ಎನ್ ವರದಿ ಮಾಡಿದೆ.
ಆದರೆ ಸಿಎನ್‌ಎನ್ ವರದಿಯನ್ನು ಶುಕ್ರವಾರ ಪ್ರಸಾರ ಮಾಡಿದ ಕೆಲವೇ ಗಂಟೆಗಳಲ್ಲಿ ಆಂತರಿಕ ಸೇವೆಯ ಸಾರ್ವಜನಿಕ ಸಂಪರ್ಕವು ನಿರಾಕರಿಸಿದ್ದು, ಅಬ್ಬಾಸ್‌ಗೆ ಸಂಬಂಧಿಸಿದ ಪ್ರತಿಕ್ರಿಯೆಗಳು ಸಂಪೂರ್ಣ ನಿರಾಧಾರ, ಕಟ್ಟುಕತೆ ಮತ್ತು ತಪ್ಪಾಗಿ ಅರ್ಥೈಸಲಾಗಿದೆಯೆಂದು ನುಡಿದರು.
'ಜಗತ್ತಿನ ಯಾವುದೇ ಗುಪ್ತಚರ ದಳವು ಯಾವುದೇ ಸಂಘಟನೆಗೆ ತನ್ನ ಬಾಗಿಲು ಮುಚ್ಚುವುದಿಲ್ಲ. ಸಂಪರ್ಕ ಹಾಗೇ ಮುಂದುವರಿಯುತ್ತದೆಂದು 'ಅಬ್ಬಾಸ್ ಸಂದರ್ಶನದಲ್ಲಿ ಹೇಳಿದ್ದಾರೆಂದು ಸಿಎನ್‌ಎನ್ ವರದಿ ಮಾಡಿದೆ. ಅಮೆರಿಕ ಮತ್ತು ತಾಲಿಬಾನ್ ಜತೆ ದಳ್ಳಾಳಿ ಪಾತ್ರವನ್ನು ವಹಿಸುವುದಕ್ಕೆ ಪ್ರತಿಯಾಗಿ ಸುದೀರ್ಘ ಕಾಲದ ವೈರಿ ಭಾರತದ ಜತೆ ತನ್ನ ವಿವಾದಗಳನ್ನು ಬಗೆಹರಿಸಲು ಅಮೆರಿಕ ವಿನಾಯಿತಿ ತೋರಬೇಕು ಎಂದು ಅಬ್ಬಾಸ್ ತಿಳಿಸಿದ್ದಾರೆ.
ಅಧ್ಯಕ್ಷ ಬರಾಕ್ ಒಬಾಮಾ ಆಡಳಿತವು ತಾಲಿಬಾನ್ ನಾಯಕರ ಜತೆ ಮಾತುಕತೆಗೆ ಹಾಗೂ ಪಾಕಿಸ್ತಾನದ ಕೆಲವು ಕಳವಳಗಳನ್ನು ಕುರಿತು ಭಾರತದ ಜತೆ ಪ್ರಸ್ತಾಪಿಸುವ ಇಚ್ಛೆ ವ್ಯಕ್ತಪಡಿಸಿತ್ತು ಎಂದು ಅಮೆರಿಕದ ಹಿರಿಯ ಅಧಿಕಾರಿಗಳು ಚಾನೆಲ್‌ಗೆ ತಿಳಿಸಿದ್ದರು. |