26/11 ದಾಳಿಗಳಲ್ಲಿ ಕಾರಣಕರ್ತರಾದ ಪಾಕ್ ಸೂತ್ರಧಾರರಿಗೆ ಶಿಕ್ಷೆ ವಿಧಿಸಲು ಪಾಕಿಸ್ತಾನ ಒಂದಿಲ್ಲೊಂದು ನೆಪ ಹೇಳುತ್ತಿದ್ದು, ಈಗ ತನಿಖೆ ವಿಳಂಬಕ್ಕೆ ಭಾರತವೇ ಕಾರಣ ಎಂದು ಮತ್ತೊಂದು ವರಸೆ ತೆಗೆದಿದೆ. ಪಾಕಿಸ್ತಾನದ ಒಳಾಡಳಿತ ಸಚಿವ ರೆಹಮಾನ್ ಮಲಿಕ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ಭಯೋತ್ಪಾದನೆ ದಾಳಿಗಳ ಬಗ್ಗೆ ಹೆಚ್ಚಿನ ಮಾಹಿತಿ ನೀಡುವಂತೆ ನಾವು ಭಾರತಕ್ಕೆ ಕೇಳಿದ್ದೆವು.
ಆದರೆ ಭಾರತ ನಮ್ಮ ಮಾತಿಗೆ ಬೆಲೆ ಕೊಡದೇ ನಿರ್ಣಾಯಕ ಮಾಹಿತಿಯನ್ನು ಒದಗಿಸಿಲ್ಲವೆಂದು ನುಡಿದರು. 26/11 ದಾಳಿಗಳನ್ನು ಕುರಿತು ನಾವು ಭಾರತೀಯ ಹೈಕಮೀಷನ್‌ಗೆ ದಾಖಲೆಯನ್ನು ಹಸ್ತಾಂತರಿಸುತ್ತಿದ್ದೇವೆಂದು ಅವರು ನುಡಿದರು. ಮುಂದಿನ ವಾರ ಮುಂಬೈ ಭಯೋತ್ಪಾದನೆ ದಾಳಿ ಕುರಿತ ವಿಚಾರಣೆ ನಡೆಯಲಿದೆಯೆಂದು ಅವರು ಹೇಳಿದರು. '9 ಮುಖ್ಯ ಆರೋಪಿಗಳಲ್ಲಿ ಐವರನ್ನು ಸರ್ಕಾರ ಬಂಧಿಸಿದೆ.
ಪಾಕಿಸ್ತಾನದ ಕಾನೂನಿನ ಅನ್ವಯ ದುಷ್ಕರ್ಮಿಗಳಿಗೆ ಶಿಕ್ಷೆ ವಿಧಿಸಲಾಗುವುದು 'ಎಂದು ಅವರು ನುಡಿದರು. ಪಾಕಿಸ್ತಾನ ತನಿಖೆಯನ್ನು ಗಂಭೀರವಾಗಿ ತೆಗೆದುಕೊಂಡಿಲ್ಲವೆಂಬ ಭಾರತದ ಆರೋಪವನ್ನು ಅವರು ನಿರಾಕರಿಸಿದರು. ಪಾಕಿಸ್ತಾನ 26/11 ತನಿಖೆಯನ್ನು ಬಹಳ ಮುತುವರ್ಜಿಯಿಂದ ನಡೆಸುತ್ತಿದೆಯೆಂದು ತಿಳಿಸಿದರು.26/11 ತನಿಖೆಯಲ್ಲಿ ಪ್ರಗತಿಯನ್ನು ಸಮಜೌತ ಎಕ್ಸ್‌ಪ್ರೆಸ್ ಸ್ಫೋಟಕ್ಕೆ ಹೋಲಿಸಿದ ಅವರು, ಸಮಜೌತ ಎಕ್ಸ್‌ಪ್ರೆಸ್ ಸ್ಫೋಟ ಪ್ರಕರಣದಲ್ಲಿ ವರದಿ ಸಲ್ಲಿಸಲು ಭಾರತ 90 ದಿನಗಳನ್ನು ತೆಗೆದುಕೊಂಡಿತು. ಆದರೆ ಪಾಕಿಸ್ತಾನ ಮುಂಬೈ ದಾಳಿಗಳನ್ನು ಕುರಿತು ದಾಖಲೆ ನೀಡಲು ಕೇವಲ 76 ದಿನಗಳನ್ನು ತೆಗೆದುಕೊಂಡಿತೆಂದು ಅವರು ಟೀಕಿಸಿದರು. |