ಅಲ್-ಖಾಯ್ದಾ ನಾಯಕ ಒಸಮಾ ಬಿನ್ ಲಾಡೆನ್ ಹಾಗೂ ಸದರಿ ಉಗ್ರಗಾಮಿ ಸಂಘಟನೆಯ ಇತರ ಪ್ರಮುಖ ನಾಯಕರು ಅಫ್ಘಾನಿಸ್ತಾನದಲ್ಲಿ ಅಡಗಿದ್ದಾರೆ ಎಂದು ಪಾಕಿಸ್ತಾನದ ಆಂತರಿಕ ಸಚಿವ ರೆಹ್ಮಾನ್ ಮಲಿಕ್ ಹೇಳಿದ್ದಾರೆ.
ಬಹುಶಃ ಆತ ಅಫ್ಘಾನ್‌ನ ಕುನಾರ್ ಪ್ರದೇಶದಲ್ಲಿ ಅವಿತಿರಬಹುದು ಎಂದಿರುವ ಮಲಿಕ್, 'ದೊಡ್ಡ ಮೀನು' ಹಿಡಿಯಲು ಅಮೆರಿಕ ನಡೆಸಿರುವ ದಾಳಿಗಳು ವ್ಯರ್ಥ ಎಂದು ಬಣ್ಣಿಸಿದ್ದಾರೆ. "ಒಸಾಮ ಪಾಕಿಸ್ತಾನದಲ್ಲಿದ್ದರೆ ನಮಗೆ ಇಷ್ಟರಲ್ಲಿ ತಿಳಿಯುತ್ತಿತ್ತು. ಪಾಕಿಸ್ತಾನವು ಇತ್ತೀಚಿನ ತಿಂಗಳಲ್ಲಿ ಸಾವಿರಾರು ಪಡೆಗಳನ್ನು ಬುಡಕಟ್ಟು ಪ್ರದೇಶಕ್ಕೆ ಕಳುಹಿಸಿದೆ. ಆತನ ಪತ್ತೆಗಾಗಿ ನಾವು ಹುಡುಕಾಟ ನಡೆಸುತ್ತಿತ್ತೇವೆ. ಒಸಮಾ ಮತ್ತು ಇತರ ನಾಲ್ಕು ಅಥವಾ ಐದು ನಾಯಕರು ನಮ್ಮ ಪ್ರದೇಶಗಳಲ್ಲಿ ಇರುತ್ತಿದ್ದರೆ ಅವರು ಇಷ್ಟೊತ್ತಿಗೆ ಬಂಧನಕ್ಕೀಡಾಗುತ್ತಿದ್ದರು" ಎಂದು ಮಲಿಕ್ 'ದಿ ಸಂಡೆ ಟೈಮ್ಸ್'ಗೆ ಹೇಳಿದ್ದಾರೆ.
"ಪಾಕಿಸ್ತಾನ ಅಧಿಕಾರಿಗಳಿಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಒಸಾಮ ಅಫ್ಘಾನಿಸ್ತಾನದಲ್ಲಿದ್ದಾನೆ. ಆತ ಕುನಾರ್ ಪ್ರದೇಶದಲ್ಲಿರಬಹುದು. ಪಾಕಿಸ್ತಾನದ ವಿರುದ್ಧದ ಹೆಚ್ಚಿನ ಚುಟುವಟಿಕೆಗಳು ಕುನಾರ್‌ನಿಂದ ನಿರ್ದೇಶಿತವಾಗುತ್ತದೆ" ಎಂದು ಸಚಿವರು ಹೇಳಿದ್ದಾರೆ.
ಅಮೆರಿಕವು ಪಾಕಿಸ್ತಾನದೊಳಗೆ ಕಳೆದ 10 ತಿಂಗಳಲ್ಲಿ 40ಕ್ಕೂ ಹೆಚ್ಚು ಡ್ರೋನ್ ದಾಳಿಗಳನ್ನು ನಡೆಸಿದೆ. ನೂರಾರು ಮಂದಿ ಸಾವಿಗೀಡಾಗಿದ್ದಾರೆ. ಈ ದಾಳಿಗಳು ಅಲ್-ಖಾಯ್ದಾ ಚಟುವಟಿಕೆಗಳನ್ನು ಗಮನೀಯವಾಗಿ ತಗ್ಗಿಸುವಲ್ಲಿ ಭಾರೀ ಪರಿಣಾಮ ಬೀರಿದೆ ಎಂದು ಸಿಐಎ ಹೇಳಿದೆ. |