ಸುದೀರ್ಘ ಕೋರ್ಟ್ ಸಮರದಲ್ಲಿ ಸೋತ ಭಾರತೀಯ ಸಂಜಾತ ಫ್ಯಾಷನ್ ವಿನ್ಯಾಸಕ ಆನಂದ್ ಜಾನ್ ತಮ್ಮ ವಕೀಲರನ್ನು ವಜಾ ಮಾಡಿ, ಸ್ವತಃ ತಾವೇ ವಾದಿಸಲು ಅನುಮತಿ ನೀಡುವಂತೆ ಕ್ಯಾಲಿಫೋರ್ನಿಯ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ. ಭರವಸೆದಾಯಕ ರೂಪದರ್ಶಿಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ ಕ್ಯಾಲಿಫೋರ್ನಿಯ ಕೋರ್ಟ್ ಜಾನ್‌ಗೆ ಶಿಕ್ಷೆ ವಿಧಿಸಿದ್ದು, ಜಾನ್ ಅವರ ಅರ್ಜಿಯನ್ನು ಇಂದು ಕೋರ್ಟ್ ವಿಚಾರಣೆಗೆ ಎತ್ತಿಕೊಳ್ಳಲಿದೆ.
ಜಾನ್ ಈಗ 162 ವರ್ಷಗಳ ಶಿಕ್ಷೆಯನ್ನು ಎದುರಿಸಲಿದ್ದಾರೆ. ಆನಂದ್ ಜಾನ್ ಸ್ವತಃ ವಕಾಲತ್ತಿಗೆ ಬಯಸಿರುವುದಾಗಿ ಅವರ ಅಟಾರ್ನಿ ರೋನಾಲ್ಡ್ ರಿಚರ್ಡ್ಸ್ ತಿಳಿಸಿದರು. ಶಿಕ್ಷೆವಿಧಿಸಿರದ ಕೈದಿಗೆ ಹಾಗೆ ಮಾಡಲು ಕೆಲವು ಸೌಲಭ್ಯಗಳಿವೆ ಎಂದು ಹೇಳಿದ ಅವರು, ವಕೀಲರಹಿತವಾಗಿ ವಾದಿಸಿದರೆ ಕಾನೂನು ಲೈಬ್ರರಿ ಮತ್ತಿತರ ವಿಷಯಗಳಿಗೆ ಅವಕಾಶವಿರುತ್ತದೆ. ನೇರವಾದ ಮಾತುಕತೆಯಿಂದ ಪ್ರತಿವಾದಿಗೆ ನೆರವಾಗಬಹುದು ಎಂದು ಅವರು ಹೇಳಿದರು.
ಆನಂದ್ ಜಾನ್ ಮೇಲ್ಮನವಿಯಲ್ಲಿ ಗೆಲ್ಲುವರೆಂದು ತಾವು ವಿಶ್ವಾಸ ಹೊಂದಿರುವುದಾಗಿ ಮತ್ತು ಅಮಾಯಕ ವ್ಯಕ್ತಿ ಇಷ್ಟೊಂದು ದೀರ್ಘಕಾಲ ಕಾಯಬೇಕಿಲ್ಲ ಎಂದು ಹೊಸ ವಿಚಾರಣೆಯನ್ನು ಶೀಘ್ರವೇ ಪುನರ್ಪರಿಶೀಲಿಸುವಂತೆ ಮನವಿ ಸಿದ್ಧಪಡಿಸಲು ನೆರವಾಗುತ್ತಿರುವ ಪ್ರತಿವಾದಿ ಅಟಾರ್ನಿ ಲಿಯೊನಾರ್ಡ್ ಲೆವೈನ್ ತಿಳಿಸಿದರು.
ಕಳೆದ ವಾರದ ಕೋರ್ಟ್ ತೀರ್ಪಿನ ಬಗ್ಗೆ ಹೇಳಿಕೆ ನೀಡಿದ ಆನಂದ್ ಜಾನ್, ತಮಗೆ ಹೊಸ ವಿಚಾರಣೆಗೆ ನಿರಾಕರಿಸಿದ ನ್ಯಾಯಾಧೀಶ ವೆಸ್ಲಿಯ ತೀರ್ಪಿನಿಂದ ನೊಂದಿರುವುದಾಗಿ ತಿಳಿಸಿದ್ದು, ಜಾನ್ ಹೇಳಿಕೆಯನ್ನು ಅವರ ಸೋದರಿ ಸಂಜನಾ ಜಾನ್ ಪ್ರಕಟಿಸಿದ್ದಾರೆ. ದೇವರ ಇಚ್ಛೆಯಿದ್ದರೆ ಎಲ್ಲವೂ ಆಗುತ್ತದೆ. ತಾವು ತಮಗಾಗಿ ಹೋರಾಡುತ್ತಿಲ್ಲ. ಕಾನೂನುಬದ್ಧ ದ್ವೇಷಸಾಧನೆಗಳಿಂದ ಈ ವ್ಯವಸ್ಥೆಯಲ್ಲಿ ಸಿಕ್ಕಿಬಿದ್ದ ಎಲ್ಲ ಆರೋಪಿತರ ಪರವಾಗಿ ತಾವು ಹೋರಾಡುತ್ತಿರುವುದಾಗಿ ಜಾನ್ ಹೇಳಿದರು.ಏತನ್ಮಧ್ಯೆ, ಕೋರ್ಟ್ ಹೊರಗೆ ಪ್ರತಿಭಟನೆ ನಡೆಸಲು ಸಂಜನಾ ನಿರ್ಧರಿಸಿದ್ದಾರೆಂದು ರಿಚರ್ಡ್ಸ್ ತಿಳಿಸಿದ್ದಾರೆ. |