ಪಾಕಿಸ್ತಾನ ದಕ್ಷಿಣ ಪಂಜಾಬ್ ಪ್ರಾಂತ್ಯದ ಗ್ರಾಮವೊಂದರಲ್ಲಿ ಸೋಮವಾರ ಸಂಭವಿಸಿದ ಭೀಕರ ಸ್ಫೋಟದಲ್ಲಿ 7 ಮಕ್ಕಳು ಸೇರಿದಂತೆ 15 ಜನರು ಸತ್ತಿದ್ದಾರೆಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ. ಮಕ್ಕಳಿಗೆ ಧಾರ್ಮಿಕ ಪಾಠಗಳನ್ನು ಬೋಧಿಸುತ್ತಿದ್ದ ಮನೆಯೊಂದರಲ್ಲಿ ಸಂಭವಿಸಿದ ಈ ಸ್ಫೋಟದಲ್ಲಿ ಕನಿಷ್ಠ 50 ಮಂದಿ ಗಾಯಗೊಂಡಿದ್ದಾರೆ.
ಖಾನೆವಾಲ್ ಜಿಲ್ಲೆಯ ಮಿಯಾನ್ ಚನ್ನು ಪ್ರದೇಶದಲ್ಲಿ ಈ ಸ್ಫೋಟ ಉಂಟಾಗಿದ್ದು, ಸುಮಾರು 2 ಡಜನ್ ಮನೆಗಳು ಸಹ ಉರುಳಿಬಿದ್ದಿವೆ. ಪಂಜಾಬ್ ಪ್ರಾಂತ್ಯಕ್ಕೆ ಕೂಡ ತಾಲಿಬಾನ್ ಪ್ರಭಾವ ವಿಸ್ತರಿಸಿದ್ದು, ಪಂಜಾಬಿನ ಮುಖ್ಯ ನಗರ ಲಾಹೋರ್ ಶ್ರೀಲಂಕಾದ ಕ್ರಿಕೆಟ್ ತಂಡ ಸೇರಿದಂತೆ ಇತ್ತೀಚಿನ ತಿಂಗಳುಗಳಲ್ಲಿ ಭಯಾನಕ ದಾಳಿಗಳಿಗೆ ಸಾಕ್ಷಿಯಾಗಿದೆ.
ಆಕಾಶಕ್ಕೆ ಬೆಂಕಿಯ ಜ್ವಾಲೆ ಎದ್ದಿದ್ದನ್ನು ತಾವು ಕಂಡಿದ್ದಾಗಿಯೂ ಮತ್ತು ನೆಲವು ಭೂಕಂಪದ ರೀತಿಯಲ್ಲಿ ಅದುರಿತು ಎಂದು ಗ್ರಾಮದ ಜನತೆ ತಿಳಿಸಿದ್ದಾರೆ. ಶಿಕ್ಷಕರ ಮನೆಯಲ್ಲಿ ಕುರಾನ್ ಪಾಠಗಳು ಎಂದಿನಂತೆ ನಡೆಯುತ್ತಿದ್ದಾಗ, ಸ್ಫೋಟ ಸಂಭವಿಸಿದ್ದಾಗಿ ಜಿಲ್ಲಾ ಸಮನ್ವಯಾಧಿಕಾರಿ ಕಮ್ರಾನ್ ಖಾನ್ ತಿಳಿಸಿದ್ದಾರೆ. ಮನೆಯಲ್ಲಿ ಬಹುಷಃ ಸ್ಫೋಟಕಗಳನ್ನು ಸಂಗ್ರಹಿಸಿಟ್ಟಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ವಿಸ್ತಾರ ಪ್ರದೇಶದವರೆಗೆ ಸ್ಫೋಟದ ಸದ್ದು ಕೇಳಿಬಂದಿದ್ದು, ಹಾನಿಯ ಪ್ರಮಾಣದಿಂದ ಭಾರೀ ಪ್ರಮಾಣದ ಸ್ಪೋಟಕ ಸಂಗ್ರಹಿಸಿಡಲಾಗಿದ್ದು ಕಂಡುಬರುತ್ತದೆಂದು ಖಾನ್ ಹೇಳಿದ್ದಾರೆ. ಸತ್ತವರಲ್ಲಿ ಏಳು ಮಕ್ಕಳು ಸೇರಿದ್ದು ಒಬ್ಬ ಮಹಿಳೆ ಮತ್ತು ಪುರುಷ ಕೂಡ ಸೇರಿದ್ದಾರೆಂದು ಆಸ್ಪತ್ರೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸುಮಾರು 40 ಅಡಿ ಅಗಲ ಮತ್ತು 8 ಅಡಿ ಆಳದ ಕಂದಕದಲ್ಲಿ ಪೊಲೀಸರು ಸಾಕ್ಷ್ಯಾಧಾರ ಸಂಗ್ರಹಿಸುತ್ತಿರುವುದನ್ನು ಟೆಲಿವಿಷನ್ ಚಿತ್ರಗಳು ತೋರಿಸಿವೆ. |