ಎಂಡವರ್ ಬಾಹ್ಯಾಕಾಶ ನೌಕೆಯನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಉಡಾವಣೆ ಮಾಡುವ ಪ್ರಕ್ರಿಯೆಯನ್ನು ಅಮೆರಿಕ ಬಾಹ್ಯಾಕಾಶ ಸಂಸ್ಥೆ ನಾಸಾ ನಾಲ್ಕನೇ ಬಾರಿಗೆ ರದ್ದುಮಾಡಿದೆ. ಬಾಹ್ಯಾಕಾಶ ತಂಡ ಸಿದ್ಧವಾಗಿದ್ದರೂ ಹವಾಮಾನದ ಪರಿಸ್ಥಿತಿ ಉಡಾವಣೆಗೆ ಸೂಕ್ತವಾಗಿಲ್ಲವಾದ್ದರಿಂದ ಉಡಾವಣೆ ರದ್ದುಮಾಡಿರುವುದಾಗಿ ನಾಸಾದ ಉಡಾವಣೆ ನಿರ್ದೇಶಕ ಪಿಟ್ ನಿಕೊಲೆಂಕೊ ಯೋಜಿತ ಉಡಾವಣೆಗೆ 10 ನಿಮಿಷಗಳು ಬಾಕಿಯಿರುವಾಗ ತಿಳಿಸಿದರು.
ಸೋಮವಾರ 17.21 ಭಾರತೀಯ ಕಾಲಮಾನದಲ್ಲಿ ಉಡಾವಣೆಯನ್ನು ಮರುನಿಗದಿ ಮಾಡಲಾಗಿದೆಯೆಂದು ನಿಕೊಲಾಂಕೊ ತಿಳಿಸಿದರು. ಎಂಡವರ್ ಮತ್ತು ಅದರ 7 ಗಗನಯಾತ್ರಿಗಳು ಉಡಾವಣೆಗೆ ಸಿದ್ದತೆ ಮಾಡುವ ಸಂದರ್ಭದಲ್ಲಿ ಫ್ಲೋರಿಡಾದ ಉಡಾವಣೆ ನೆಲೆಯಿಂದ 32 ಕಿಮೀ ದೂರದಲ್ಲಿ ಬಿರುಗಾಳಿ ಎದ್ದಿದ್ದರಿಂದ ಉಡಾವಣೆಯನ್ನು ರದ್ದುಮಾಡಲಾಯಿತು.
ಸಮುದ್ರದ ಮಂದಮಾರುತದಿಂದ ಬಿರುಗಾಳಿ ಸ್ಥಳಾಂತರಗೊಳ್ಳಬಹುದೆಂಬ ಆಶಯದೊಂದಿಗೆ ನಾಸಾ ಅಧಿಕಾರಿಗಳು ಕಡೆ ನಿಮಿಷಗಳ ತನಕ ಉಡಾವಣೆಗೆ ಕಾದರು. ಆದರೆ ಕ್ಷಣಗಳು ಉರುಳುತ್ತಿದ್ದಂತೆ, ಕೆನಡಿ ಬಾಹ್ಯಾಕಾಶ ಕೇಂದ್ರಕ್ಕೆ ಕೆಲವೇ ಮೈಲುಗಳ ದೂರದಲ್ಲಿ ಸಿಡಿಲು ಬಡಿದಿರುವ ಸುದ್ದಿ ಕೇಳಿಬಂದಿದ್ದರಿಂದ ಉಡಾವಣೆ ರದ್ದುಮಾಡಲಾಯಿತು. |