ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಕೈದಿಗಳ ಸಾಮೂಹಿಕ ಮರಣದಂಡನೆ ಕುರಿತ ತನಿಖೆಯನ್ನು ಮುಚ್ಚಿಹಾಕುವ ಯತ್ನದ ಬಗ್ಗೆ ತನಿಖೆಗೆ ಆದೇಶಿಸಿರುವುದಾಗಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ತಿಳಿಸಿದ್ದು, ಅವರ ಸಂದರ್ಶನ ಸೋಮವಾರ ಪ್ರಸಾರವಾಗಲಿದೆ.
ಎಫ್‌ಬಿಐ, ವಿದೇಶಾಂಗ ಇಲಾಖೆ ಮತ್ತು ಪೆಂಟಗನ್ ಈ ಕುರಿತು ಪ್ರತ್ಯೇಕ ತನಿಖೆಗಳನ್ನು ನಡೆಸುವುದನ್ನು ಅಧ್ಯಕ್ಷ ಜಾರ್ಜ್ ಡಬ್ಲ್ಯು ಬುಷ್ ಅವರ ಹಿಂದಿನ ಆಡಳಿತಕ್ಕೆ ಸೇರಿದ ಉನ್ನತಾಧಿಕಾರಿಗಳು ನಿರುತ್ಸಾಹಗೊಳಿಸಿದರೆಂದು ಅಮೆರಿಕದ ಪ್ರಮುಖ ಪತ್ರಿಕೆಯೊಂದು ವರದಿ ಮಾಡಿದೆ.
2001ರಲ್ಲಿ ಸುಮಾರು 2000 ಕೈದಿಗಳ ಸಾಮೂಹಿಕ ಕಗ್ಗೊಲೆಯನ್ನು ಮುಚ್ಚಿಹಾಕಲು ಅವರು ಬಯಸಿದ್ದರು. ಸಿಐಎ ವೇತನಪಟ್ಟಿಯಲ್ಲಿದ್ದ ಆಫ್ಘನ್ ಮಿಲಿಟರಿ ಕಮಾಂಡರ್ ಜನರಲ್ ಅಬ್ದುಲ್ ರಷೀದ್ ದೋಸ್ತಾಂ ಪಡೆಗಳು ಈ ಮರಣದಂಡನೆಯನ್ನು ಕಾರ್ಯಗತಗೊಳಿಸಿದ್ದರಿಂದ ಅದನ್ನು ಮುಚ್ಚಿಹಾಕಲು ಅವರು ಬಯಸಿದ್ದರೆಂದು ಪತ್ರಿಕೆ ತಿಳಿಸಿದೆ. ಈ ಕುರಿತ ತನಿಖೆಯನ್ನು ಸಮರ್ಪಕವಾಗಿ ನಡೆಸುತ್ತಿಲ್ಲವೆಂಬ ಸೂಚನೆ ತಮ್ಮ ಗಮನಕ್ಕೆ ಇತ್ತೀಚೆಗೆ ಬಂದಿತೆಂದು ಒಬಾಮಾ ಈ ವಾರಾಂತ್ಯದಲ್ಲಿ ಘಾನಾಗೆ ಭೇಟಿ ನೀಡಿದ್ದಾಗ ಟೆಲಿವಿಷನ್ ಸುದ್ದಿ ಚಾನೆಲ್‌ಗೆ ತಿಳಿಸಿದ್ದರು.
ಆದ್ದರಿಂದ ರಾಷ್ಟ್ರೀಯ ಭದ್ರತಾ ತಂಡಕ್ಕೆ ತಾವು ಸತ್ಯಾಂಶಗಳನ್ನು ಸಂಗ್ರಹಿಸುವಂತೆ ತಾವು ತಿಳಿಸಿದ್ದು, ಎಲ್ಲ ಸತ್ಯಾಂಶ ಸಂಗ್ರಹಣ ಬಳಿಕ ಹೇಗೆ ಮುಂದುವರಿಯಬೇಕೆಂದು ನಿರ್ಧರಿಸುವುದಾಗಿ ಒಬಾಮಾ ಹೇಳಿದ್ದಾರೆಂದು ಚಾನೆಲ್ ಬಿಡುಗಡೆ ಮಾಡಿದ ಸಂದರ್ಶನದ ತುಣುಕುಗಳಲ್ಲಿ ತಿಳಿಸಲಾಗಿದೆ.
ಎಲ್ಲ ರಾಷ್ಟ್ರಗಳಿಗೆ ಕೆಲವು ಜವಾಬ್ದಾರಿಯಿದ್ದು, ಯುದ್ಧದಲ್ಲಿ ಕೂಡ ಕೆಲವು ಜವಾಬ್ದಾರಿ ಹೊಂದಿವೆಯೆಂದು ಒಬಾಮಾ ಚಾನೆಲ್‌ಗೆ ತಿಳಿಸಿದ್ದಾರೆ. ನಮ್ಮ ವರ್ತನೆಯು ಒಂದು ರೀತಿಯಲ್ಲಿ ಯುದ್ಧದ ಕಾನೂನುಗಳ ಉಲ್ಲಂಘನೆಗೆ ಒತ್ತಾಸೆಯಾಗಿರುವುದಾಗಿ ಕಾಣುತ್ತದೆಂದು ಒಬಾಮಾ ಹೇಳಿದರು. |