ಮುಂಬೈನಲ್ಲಿ 26/11ರ ಭಯೋತ್ಪಾದನೆ ದಾಳಿ ಮಾದರಿಯಲ್ಲಿ ಲಂಡನ್‌ನ ಪ್ರವಾಸಿ ಕೇಂದ್ರಗಳ ಮೇಲೆ ಭಯೋತ್ಪಾದನೆ ದಾಳಿ ನಡೆಸಲು ಥೇಮ್ಸ್ ನದಿಗೆ ಸ್ಫೋಟಕಗಳನ್ನು ತುಂಬಿದ ದೋಣಿಗಳನ್ನು ಕಳಿಸುವ ಮೂಲಕ ಭಯೋತ್ಪಾದಕರು ಯೋಜಿಸಿದ್ದರೆಂಬ ಆಘಾತಕಾರಿ ಸುದ್ದಿಯನ್ನು ಗುಪ್ತಚರ ಅಧಿಕಾರಿಯೊಬ್ಬರು ಸೋಮವಾರ ಬಯಲು ಮಾಡಿದ್ದಾರೆ.
ಸಂಸತ್ ಭವನ, ಲಂಡನ್ ಐ ಮತ್ತು ಕೆನರಿ ವಾರ್ಫ್ ಮುಂತಾದ ಪ್ರಮುಖ 100 ಸ್ಥಳಗಳು ಭಯೋತ್ಪಾದನೆ ದಾಳಿಗಳ ಅಪಾಯಕ್ಕೆ ಸುಲಭ ತುತ್ತು ಎಂಬ ಭದ್ರತಾ ಅಧಿಕಾರಿಗಳ ಹೇಳಿಕೆ ಉಲ್ಲೇಖಿಸಿ ಸ್ಟಾರ್ ನ್ಯೂಸ್ ಸುದ್ದಿಪತ್ರಿಕೆ ವರದಿ ಮಾಡಿದೆ. ದೋಣಿಗಳನ್ನು ಬಳಸಿಕೊಂಡು ಸಂಘಟಿತ ದಾಳಿ ನಡೆಸುವುದು ಎಷ್ಟು ಸುಲಭ ಎನ್ನುವುದಕ್ಕೆ ಮುಂಬೈ ದಾಳಿ ಸಾಕ್ಷಿಯೊದಗಿಸಿದೆ. ಮುಂಬೈ ನಗರಕ್ಕೆ ತಲುಪಲು ನೌಕೆಗಳನ್ನು ಬಳಸಲಾಯಿತಾದರೂ ದೋಣಿಗಳ ಮೂಲಕವೂ ಅಷ್ಟೇ ಸುಲಭವಾಗಿ ದಾಳಿ ನಡೆಸಲು ಸಾಧ್ಯವಾಯಿತು ಎಂದು ಗುಪ್ತಚರ ಅಧಿಕಾರಿ ತಿಳಿಸಿದರು.
ಗುಪ್ತಚರ ಮಾಹಿತಿಗಳ ಹಿನ್ನೆಲೆಯಲ್ಲಿ ಲಂಡನ್ ನದಿ ಗಸ್ತು ಪೊಲೀಸರು ಇಸ್ಲಾಮಿಕ್ ಧರ್ಮಾಂಧರ ಚಲನವಲನಗಳ ಬಗ್ಗೆ ಕಟ್ಟೆಚ್ಚರ ವಹಿಸಿದ್ದಾರೆ. ಭಯೋತ್ಪಾದನೆ ನಿಗ್ರಹ ಕಾನೂನಿನ ಅಡಿಯಲ್ಲಿ ದೋಣಿಗಳ ಮೂಲಕ ಶೋಧ ನಡೆಸುವ ಮೂಲಕ ನೌಕಾಯಾನ ಬೆಂಬಲ ಘಟಕ ಸ್ಪಂದಿಸಿದೆ.
ಲಂಡನ್ ನಗರವನ್ನು ಭಯೋತ್ಪಾದಕರಿಂದ ರಕ್ಷಿಸುವುದು ನಮ್ಮ ಮುಖ್ಯ ಗುರಿಯಾಗಿದ್ದು, ಸಂಸತ್ ಭವನ, ಲಂಡನ್ ಐ ಮುಂತಾದ ಪ್ರಮುಖ ಕಟ್ಟಡಗಳು ಯಾವ ಸಂದರ್ಭದಲ್ಲಿ ಬೇಕಾದರೂ ದಾಳಿಗೆ ಗುರಿಯಾಗಬಹುದು ಎಂದು ಸಾರ್ಜಂಟ್ ಮಾರ್ಕ್ ಸ್ಪರ್ಜನ್ ಪ್ರತಿಕ್ರಿಯಿಸಿದ್ದಾರೆ.
ಥೇಮ್ಸ್ ನದಿಯಲ್ಲಿ ನಾವು ಗಸ್ತನ್ನು ಬಿಗಿಗೊಳಿಸಿದ್ದೇವೆ. ದೋಣಿಗಳನ್ನು ನಿಲ್ಲಿಸಿ ಶಸ್ತ್ರಾಸ್ತ್ರ ಮತ್ತು ಶಂಕಿತ ಪ್ಯಾಕೇಜ್‌ಗಳನ್ನು ಶೋಧಿಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ. ಬಂದೂಕುಧಾರಿಗಳು ಮುಂಬೈಯನ್ನು ದೋಣಿಗಳಲ್ಲಿ ತಲುಪಿದ ಬಳಿಕ ಭಾರತದ ಕರಾವಳಿ ತೀರ ಭಯೋತ್ಪಾದಕರಿಗೆ ಸುಲಭ ತುತ್ತು ಎಂಬುದಕ್ಕೆ ಸಾಕ್ಷಿಯೊದಗಿಸಿದ್ದರಿಂದ ಲಂಡನ್‌ನಲ್ಲಿ ಥೇಮ್ಸ್ ನದಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. |