ನೇಪಾಳದ ಉಪ ರಾಷ್ಟ್ರಾಧ್ಯಕ್ಷ ಪರಮಾನಂದ್ ಝಾ ಹಿಂದಿ ಭಾಷೆಯಲ್ಲಿ ಪ್ರಮಾಣವಚನ ಸ್ವೀಕರಿಸಿರುವುದನ್ನು ತರಾಟೆಗೆ ತೆಗೆದುಕೊಂಡ ಸರ್ವೋಚ್ಚ ನ್ಯಾಯಾಲಯ ಅಧಿಕಾರದಲ್ಲಿ ಮುಂದುವರಿಯಬೇಕಾದಲ್ಲಿ ಒಂದು ವಾರದ ಅವಧಿಯಲ್ಲಿ ನೇಪಾಳಿ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸುವಂತೆ ಆದೇಶಿಸಿದೆ.
ಅಪೆಕ್ಸ್ ನ್ಯಾಯಾಲಯದ ಐದು ಮಂದಿ ನ್ಯಾಯಾಧೀಶರ ಪೀಠ, ಸಂವಿಧಾನಕ್ಕೆ ಅನುಗುಣವಾಗಿ ದೇಶದ ಮಾತೃಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸುವುದು ಅಗತ್ಯವಾಗಿತ್ತು. ಆದರೆ ಉಪ ರಾಷ್ಟ್ರಾಧ್ಯಕ್ಷ ಪರಮಾನಂದ ಝಾ ಹಿಂದಿ ಭಾಷೆಯಲ್ಲಿ ಪ್ರಮಾಣವಚನ ಸ್ವೀಕರಿಸಿ ಸಂವಿಧಾನವನ್ನು ಉಲ್ಲಂಘಿಸಿದ್ದಾರೆ ಎಂದು ಕಟುವಾಗಿ ತರಾಟೆಗೆ ತೆಗೆದುಕೊಂಡಿದೆ.
ಮುಂಬರುವ ಜುಲೈ 24 ರೊಳಗಾಗಿ ನೇಪಾಳಿ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸದಿದ್ದಲ್ಲಿ ಅವರನ್ನು ಹುದ್ದೆಯಿಂದ ವಜಾಗೊಳಿಸಲು ಆದೇಶಿಸಲಾಗುವುದು ಎಂದು ನ್ಯಾಯಾಧೀಶರ ಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ.