ಇಸ್ಲಾಮಾಬಾದ್, ಶುಕ್ರವಾರ, 14 ಆಗಸ್ಟ್ 2009( 11:45 IST )
PTI
2007ರಲ್ಲಿ ಸಂವಿಧಾನಬಾಹಿರವಾಗಿ ದೇಶದಲ್ಲಿ ತುರ್ತುಪರಿಸ್ಥಿತಿ ಜಾರಿಗೊಳಿಸಿ, ಈ ಸಂದರ್ಭದಲ್ಲಿ 60ಮಂದಿ ನ್ಯಾಯಾಧೀಶರನ್ನು ಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಅಧ್ಯಕ್ಷ ಪರ್ವೇಜ್ ಮುಷರ್ರಫ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರೂ ಸಹ ಸರ್ಕಾರದ ನೇರ ಆದೇಶವಿಲ್ಲದೇ ಅವರನ್ನು ಬಂಧಿಸುವುದಾಗಲೀ, ಪ್ರಶ್ನೆ ಮಾಡುವುದಾಗಲಿ ಸಾಧ್ಯವಿಲ್ಲ ಎಂದು ಮಾಧ್ಯಮದ ವರದಿಯೊಂದು ತಿಳಿಸಿದೆ.
ಮುಷ್ ಹಾಗೂ ಹೆಸರು ಬಹಿರಂಗಗೊಳಿಸದ ವ್ಯಕ್ತಿಯ ವಿರುದ್ಧ ಇತ್ತೀಚೆಗೆ ಪ್ರಕರಣ ದಾಖಲಾಗಿದ್ದರೂ ಸಹ, ಸಂವಿಧಾನಾತ್ಮಕ ವಿನಾಯ್ತಿ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲು ಸಾಧ್ಯವಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ಡಾನ್ ಪತ್ರಿಕೆಯ ವರದಿಯಲ್ಲಿ ಹೇಳಿದೆ.
ಜಿಲ್ಲಾ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಇಸ್ಲಾಮಾಬಾದ್ ಪೊಲೀಸ್ ಠಾಣೆಯಲ್ಲಿ ನ್ಯಾಯಾಧೀಶರನ್ನು ಅಕ್ರಮವಾಗಿ ಬಂಧಿಸಿದ್ದನ್ನು ಪ್ರಶ್ನಿಸಿ ಮುಷರ್ರಫ್ ವಿರುದ್ಧ ಪ್ರಕರಣ ದಾಖಲಾಗಿದೆ. ಆರಂಭದಲ್ಲಿ ಮುಷರ್ರಫ್ ಅವರು ದೇಶಕ್ಕೆ ಹಿಂತಿರುಗಿದ ನಂತರ ಅವರನ್ನು ಬಂಧಿಸುವ ಸಾಧ್ಯತೆ ಇದೆ ಎಂದು ವ್ಯಾಖ್ಯಾನಿಸಲಾಗಿತ್ತು.
ಪ್ರಸ್ತುತ ಮುಷರ್ರಫ್ ಅವರು ಯುರೋಪ್‌ನಲ್ಲಿದ್ದು, ಈ ಬಾರಿ ಅವರು ಬಂಧನಕ್ಕೆ ಒಳಗಾಗದಿದ್ದರೆ, ಪೊಲೀಸರು ಜಿಲ್ಲಾ ನ್ಯಾಯಾಲಯದ ಮೂಲಕ ಅವರನ್ನು ಘೋಷಿತ ಅಪರಾಧಿ ಎಂದು ಘೋಷಣೆ ಮಾಡಬಹುದು ಇಲ್ಲವೇ ಪಲಾಯನ ಮಾಡಿರುವವರು ಎಂದು ಘೋಷಣೆ ಮಾಡಬಹುದಾಗಿದೆ.