1988ರಲ್ಲಿ ಲೋಕೆರ್‌ಬಿ ಬಾಂಬ್ ಸ್ಫೋಟದ ರೂವಾರಿಯಾಗಿರುವ ಲಿಬಿಯಾದ ಕೈದಿಯನ್ನು ಬಿಡುಗಡೆ ಮಾಡುವುದಕ್ಕೆ ಅಮೆರಿಕ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
1988ರಲ್ಲಿ ಲೋಕೆರ್‌ಬಿ ಬಾಂಬ್ ಸ್ಫೋಟದಲ್ಲಿ 270ಮಂದಿ ಸಾವನ್ನಪ್ಪಿದ್ದರು. ಆ ನಿಟ್ಟಿನಲ್ಲಿ ಪ್ರಕರಣದ ಪ್ರಮುಖ ರೂವಾರಿ ಬಗ್ಗೆ ನಾವು ನಮ್ಮ ಪೂರ್ಣ ಪ್ರಮಾಣದ ವಿಷಯವನ್ನು ಬ್ರಿಟನ್ ಸರ್ಕಾರಕ್ಕೆ ತಿಳಿಸಿದ್ದೇವೆ. ಹಾಗಾಗಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಆತ ಇನ್ನುಳಿದ ಸಮಯವನ್ನು ಜೈಲಿನಲ್ಲಿಯೇ ಕಳೆಯಲಿ ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರ ಪಿ.ಜೆ.ಕ್ರೌಲೆ ತಿಳಿಸಿದ್ದಾರೆ.
1988ರಲ್ಲಿ ಪಾನ್ ಎಎಂ ವಿಮಾನಕ್ಕೆ ಬಾಂಬ್ ದಾಳಿ ನಡೆಸಿದ್ದ 57ರ ಹರೆಯದ ಅಬ್ದೆಲ್ ಬಾಸ್ಸೆಟ್ ಅಲ್ ಮೆಗ್ರಾಹಿಗೆ 2001ರಲ್ಲಿ ಸ್ಕಾಟ್‌ಲ್ಯಾಂಡ್ ಜೀವಾವಧಿ ಶಿಕ್ಷೆ ವಿಧಿಸಿತ್ತು.
ಮೂತ್ರಜನನಾಂಗದ ಕ್ಯಾನ್ಸರ್‌ನಿಂದ ಬಳಲುತ್ತಿರುವ ಅಲ್ ಮೆಗ್ರಾಹಿಯನ್ನು ಅನುಕಂಪದ ನೆಲೆಯಲ್ಲಿ ಬ್ರಿಟನ್ ಸರ್ಕಾರ ಬಂಧಮುಕ್ತಗೊಳಿಸಲಿದೆ ಎಂದು ಬ್ರಿಟಿಷ್ ಮಾಧ್ಯಮಗಳ ವರದಿ ತಿಳಿಸಿದೆ. ಆತ ಲಿಬಿಯಾದಲ್ಲಿರುವ ತನ್ನ ಕುಟುಂಬವರ್ಗದೊಂದಿಗೆ ಕಾಲಕಳೆಯಬಹುದಾಗಿದೆ ಎಂದು ಸರ್ಕಾರ ತಿಳಿಸಿರುವುದಾಗಿ ವರದಿ ಹೇಳಿದೆ. ಈ ಹೇಳಿಕೆಗೆ ಅಮೆರಿಕ ಆಕ್ಷೇಪ ವ್ಯಕ್ತಪಡಿಸಿದೆ.