ಭಾರತವು ತನ್ನ ಗಡಿಭಾಗದಲ್ಲಿ ಭಾರಿ ಪ್ರಮಾಣದ ಶಸ್ತ್ರಾಸ್ತ್ರ ಸಂಗ್ರಹಿಸುತ್ತಿರುವುದಕ್ಕೆ ಪಾಕಿಸ್ತಾನ ಕಳವಳ ವ್ಯಕ್ತಪಡಿಸಿದೆ. ಆದರೆ ಆಂತರಿಕ ಮತ್ತು ಬಾಹ್ಯ ಸವಾಲುಗಳನ್ನು ಎದುರಿಸಿ, ಸ್ವರಕ್ಷಣೆ ಮಾಡಿಕೊಳ್ಳುವಲ್ಲಿ ಪಾಕ್ ಶಕ್ತವಾಗಿದೆ ಎಂದು ಹೇಳಿದೆ.
ಪಾಕ್ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಶುಕ್ರವಾರ ಕಕೂಲ್ ಮಿಲಿಟರಿ ಅಕಾಡೆಮಿಯಲ್ಲಿ ಸೈನಿಕರ ಪಥ ಸಂಚಲನದಲ್ಲಿ ಪಾಲ್ಗೊಂಡು ಮಾತನಾಡಿದ ಸೇನಾ ಮುಖ್ಯಸ್ಥ ಜನರಲ್ ಅಶ್ಫಾಕ್ ಪರ್ವೇಜ್ ಕಯಾನಿ ಮೇಲಿನಂತೆ ಹೇಳಿದ್ದಾರೆ.
ಪಾಕ್ ಸುತ್ತಮುತ್ತಲಿನ ಪ್ರದೇಶದಲ್ಲಿ ಶಸ್ತ್ರಾಸ್ತ್ರ ಒಗ್ಗೂಡಿಸುತ್ತಿರುವ ಇತರ ರಾಷ್ಟ್ರಗಳ ಕುರಿತು ಕಯಾನಿ ಸ್ಪಷ್ಟವಾಗಿ ಉಲ್ಲೇಖಿಸಿಲ್ಲ. ಆದರೆ ಭಾರತವು ಇತ್ತೀಚಿನ ದಿನಗಳಲ್ಲಿ ತನ್ನ ಗಡಿ ಭಾಗಗಳಲ್ಲಿ ದೈತ್ಯ ಸಮರ ಆಯುಧಗಳನ್ನು ಪೇರಿಸಿರುವುದರ ಕುರಿತು ಅವರು ಪರೋಕ್ಷ ಪರಾಮರ್ಶೆ ನಡೆಸಿದರು.
ತಿಂಗಳ ಹಿಂದಷ್ಟೇ ಭಾರತ ಪರಮಾಣು ಶಕ್ತಿ ಚಾಲಿತ ಜಲಾಂತರ್ಗಾಮಿ ಪರೀಕ್ಷೆ ನಡೆಸಿ ದೇಶದ ಅಣ್ವಸ್ತ್ರ ಸಾಮರ್ಥ್ಯವನ್ನು ಪ್ರದರ್ಶಿಸಿತ್ತು. ಪಾಕ್‌ನ ಅಖಂಡತೆಗಾಗಿ ಮೂಲಭೂತವಾದಿ ಉಗ್ರಗಾಮಿ ಚಟುವಟಿಕೆ ಅಥವಾ ಸೈನಿಕ ಕ್ರಾಂತಿಯನ್ನು ಹತ್ತಿಕ್ಕಲಾಗುವುದು ಎಂದು ಅವರು ಹೇಳಿದರು.