ಅಂತಾರಾಷ್ಟ್ರೀಯ ನೇತೃತ್ವದ ನ್ಯಾಟೋ ಮಿಲಿಟರಿ ಕೇಂದ್ರ ಕಚೇರಿಯನ್ನು ಗುರಿಯಾಗಿರಿಸಿಕೊಂಡು ಶನಿವಾರ ನಡೆಸಿದ ಆತ್ಮಹತ್ಯಾ ಕಾರ್ ಬಾಂಬ್ ಸ್ಫೋಟದಲ್ಲಿ ಏಳು ಮಂದಿ ಸಾವನ್ನಪ್ಪಿದ್ದು, 70ಮಂದಿ ಗಾಯಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಸ್ಫೋಟದ ಹೊಣೆಯನ್ನು ತಾಲಿಬಾನ್ ಉಗ್ರಗಾಮಿ ಸಂಘಟನೆ ಹೊತ್ತುಕೊಂಡಿದೆ.
ಭಾರೀ ಭದ್ರತೆಯನ್ನು ಹೊಂದಿದ್ದ ಅಮೆರಿಕ ರಾಯಭಾರಿ ಕಚೇರಿ ಹಾಗೂ ಅಫ್ಘಾನ್ ಅಧ್ಯಕ್ಷರ ಪ್ಯಾಲೆಸ್ ಅನ್ನು ಗುರಿಯಾಗಿರಿಸಿ ಈ ದಾಳಿ ನಡೆಸಲಾಗಿದೆ. ಅಫ್ಘಾನ್‌ನ ಚುನಾವಣೆಗೆ ಕೆಲವೇ ದಿನ ಇರುವ ಮುನ್ನವೇ ವ್ಯವಸ್ಥಿತವಾಗಿ ಆತ್ಮಹತ್ಯಾ ದಾಳಿಯನ್ನು ನಡೆಸಿರುವುದು ಕಳವಳಕ್ಕೆ ಎಡೆಮಾಡಿಕೊಟ್ಟಿದೆ.
ಆದರೆ ಭಾರತೀಯ ರಾಯಭಾರಿ ಕಚೇರಿ ಸುರಕ್ಷಿತವಾಗಿದ್ದು, ಯಾರಿಗೂ ಯಾವುದೇ ಹಾನಿ ಸಂಭವಿಸಿಲ್ಲ ಎಂದು ವರದಿ ವಿವರಿಸಿದೆ. ನ್ಯಾಟೋ ಕಚೇರೆ ಹೊರಭಾಗದಲ್ಲಿ ಏಕಾಏಕಿ ಸಂಭವಿಸಿದ ಭಾರೀ ಸ್ಫೋಟದಿಂದ ದಾರಿಯಲ್ಲಿ ಸಾಗುತ್ತಿದ್ದ ಮಕ್ಕಳು ಸೇರಿದಂತೆ ಹಲವಾರು ಮಂದಿ ಗಾಯಗೊಂಡಿದ್ದಾರೆ.
ಸ್ಫೋಟದಲ್ಲಿ ಏಳು ಅಫ್ಘಾನ್ ನಾಗರಿಕರು ಸಾವನ್ನಪ್ಪಿದ್ದು, 70ಮಂದಿ ಗಾಯಗೊಂಡಿರುವುದಾಗಿ ಅಫ್ಘಾನ್ ರಕ್ಷಣಾ ಸಚಿವಾಲಯದ ವಕ್ತಾರ ಜನರಲ್ ಮೊಹಮ್ಮದ್ ಜಹೀರ್ ತಿಳಿಸಿದ್ದಾರೆ.