ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರ್ರಫ್ ಮೇಲೆ ಹೂಡಿರುವ ಕ್ರಿಮಿನಲ್ ಮೊಕದ್ದಮೆ ಅನಿರೀಕ್ಷಿತವೇನೂ ಅಲ್ಲ. ಈ ರೀತಿ ಆಗಬಹುದೆಂದು ಊಹಿಸಲಾಗಿತ್ತು ಎಂದು ಮುಷ್ ಅವರ ಆಪ್ತ ಮೂಲಗಳು ತಿಳಿಸಿವೆ.
ಕ್ರಿಮಿನಲ್ ಪ್ರಕರಣ ದಾಖಲಿಸಿರುವುದು ಮುಷರ್ರಫ್ ಅವರ ರಾಜಕೀಯ ಜೀವನಕ್ಕೆ ಧಕ್ಕೆ ತರಲು ಆಡಿರುವ ರಾಜಕೀಯ ಆಟ. ಇದರಿಂದೇನೂ ಪ್ರಯೋಜನವಾಗದು ಎಂದು ಮುಷ್ ಅವರ ಕಾನೂನು ತಂಡದ ಸದಸ್ಯ ಸೈಫ್ ಅಲಿಖಾನ್ ಹೇಳಿದ್ದಾರೆ.
ಕ್ರಿಮಿನಲ್ ಮೊಕದ್ದಮೆ ಹೂಡಿದ್ದರಿಂದ ಮುಷರ್ರಫ್ ಅವರೇನೂ ವಿಚಲಿತರಾಗಿಲ್ಲ. ಹಾಗೆ ಅವರ ಬೆಂಬಲಿಗರು ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಒಂದು ವೇಳೆ ಅವರನ್ನು ಬಂಧಿಸುವ ಸಾಧ್ಯತೆಗಳಿದ್ದರೆ ಅದನ್ನು ತಡೆಯಲಾಗುವುದು ಎಂದಿದ್ದಾರೆ. ತನ್ನ ಮೇಲೆ ಹೂಡಿರುವ ಕ್ರಿಮಿನಲ್ ಮೊಕದ್ದಮೆ ವಿರುದ್ಧ ಮುಷರ್ರಫ್ ಕಾನೂನು ಹೋರಾಟ ನಡೆಸಲಿದ್ದಾರೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.