ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅವಮಾನ ಮಾಡಲಾಗಿದೆ- ಖಾನ್; ಅದು ನಮ್ಮ ನಿಯಮ- ಅಮೆರಿಕಾ (Shah Rukh Khan | India | Bollywood | US)
 
ನಾನೊಬ್ಬ ಮುಸ್ಲಿಮ್, ಹಾಗಾಗಿ ನನ್ನ ಹೆಸರಿನ ಸರ್‌ನೇಮ್ 'ಖಾನ್' ಎಂದಾಗಿತ್ತು; ಇದೇ ಕಾರಣದಿಂದ ನನ್ನನ್ನು ಅಮೆರಿಕಾದ ವಿಮಾನ ನಿಲ್ದಾಣದಲ್ಲಿ ಅವಮಾನಿಸಲಾಯಿತು ಎಂದು ಖ್ಯಾತ ಬಾಲಿವುಡ್ ನಟ ಶಾರೂಖ್ ಖಾನ್ ಕಿಡಿ ಕಾರಿದ್ದಾರೆ. ಆದರೆ ಇದನ್ನು ನಿರಾಕರಿಸಿರುವ ಅಮೆರಿಕಾ ವಕ್ತಾರರು, ನಟನನ್ನು ನಾವು ಯಾವುದೇ ರೀತಿಯಲ್ಲಿ ಅಪಮಾನ ಮಾಡಿಲ್ಲ; ಅವರನ್ನು ವಶಕ್ಕೆ ತೆಗೆದುಕೊಂಡು ತನಿಖೆಯನ್ನೂ ನಡೆಸಿಲ್ಲ. ನಮ್ಮ ನಿಯಮಗಳಂತೆ ಪ್ರವಾಸಿಗರನ್ನು ಪರಿಶೀಲಿಸುವ ರೀತಿಯಲ್ಲಿಯೇ ಅವರನ್ನು ಕೂಡ ಪ್ರಶ್ನಿಸಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ನನ್ನನ್ನು ಅವಮಾನಿಸಲಾಯಿತು..
ನನ್ನ ಹೆಸರಿನಲ್ಲಿ ಖಾನ್ ಎಂದಿದ್ದಿದ್ದರಿಂದ ಅಮೆರಿಕಾ ವಿಮಾನ ನಿಲ್ದಾಣದಲ್ಲಿ ನನಗೆ ಸಮಸ್ಯೆಯೆದುರಾಯಿತು. ನನ್ನ ಹೆಸರು ಮುಸ್ಲಿಂ ಸಮುದಾಯದ್ದಾಗಿದ್ದ ಕಾರಣ ಅವರ ಶಂಕಿತರ ಪಟ್ಟಿಗೆ ಹೋಲಿಕೆ ಇದ್ದಿರಬಹುದು. ನಾನು ನನ್ನ ಬ್ಯಾಗ್‌ಗಳಿಗಾಗಿ ಕಾಯುತ್ತಿದ್ದೆ. ಆ ಹೊತ್ತಿನಲ್ಲಿ ಕೆಲವು ಅಧಿಕಾರಿಗಳು ನನ್ನನ್ನು ಪ್ರಶ್ನಿಸಲಾರಂಭಿಸಿದರು. ನಂತರ ಒಂದು ಕೋಣೆಗೆ ಕರೆದೊಯ್ದರು. ಅದು ಎರಡನೇ ಹಂತದ ತಪಾಸನೆಯಾಗಿತ್ತು. ತೀರಾ ಶಂಕೆ ಕಂಡು ಬಂದರೆ ಆ ರೂಮಿಗೆ ಕರೆದುಕೊಂಡು ಹೋಗಿ ತಪಾಸಣೆ ನಡೆಸಲಾಗುತ್ತದೆ. ಅಲ್ಲಿ ತಪಾಸಣೆಗೊಳಗಾಗಲು ಕಾಯುತ್ತಿದ್ದ ಇತರ ಏಷಿಯನ್ ಪ್ರಜೆಗಳೂ ಇದ್ದರು. ಅಲ್ಲಿರಲು ಆ ಹೊತ್ತಿನಲ್ಲಿ ತೀರಾ ಅವಮಾನವೆನಿಸಿದ್ದರಿಂದ ಅಧಿಕಾರಿಗಳು ನನ್ನನ್ನು ಬೇರೆ ಕೊಠಡಿಗೆ ಕರೆದೊಯ್ಯುವರೆಂದುಕೊಂಡಿದ್ದೆ. ಆದರೆ ನಾನು ಅವರ ಜತೆಗೆ ಉಳಿಯಬೇಕಾಯಿತು.
IFM


ಒಟ್ಟಾರೆ ಪ್ರಕರಣವು ನನಗೆ ತೀರಾ ಇರಿಸು ಮುರಿಸು ಉಂಟು ಮಾಡಿತು. ನನ್ನ ಬಳಿ ಅಗತ್ಯ ದಾಖಲೆ ಪತ್ರಗಳು ಮತ್ತು ಕೆಲವೇ ದಿನಗಳ ಹಿಂದೆ ಒಂದು ತಿಂಗಳ ಕಾಲ ಅಲ್ಲೇ ಉಳಿದುಕೊಂಡಿದ್ದ ಹೊರತಾಗಿಯೂ ಅವರು ನನ್ನನ್ನು ನಂಬಲಿಲ್ಲ. ಈ ಹೊತ್ತಿನಲ್ಲಿ ನನ್ನ ಜತೆ ಕುಟುಂಬಿಕರು ಇರದೇ ಇದ್ದದ್ದು ಸಮಾಧಾನ ತಂದಿದೆ. ಇದೇ ಕಾರಣಕ್ಕಾಗಿ ನಾನು ಅಮೆರಿಕಾ ಭೇಟಿಯನ್ನು ಆದಷ್ಟು ತಪ್ಪಿಸಿಕೊಳ್ಳುತ್ತಾ ಬರುತ್ತಿದ್ದೇನೆ ಎಂದು ಬೇಸರ ವ್ಯಕ್ತಪಡಿಸಿದರು ಬಾಲಿವುಡ್ ನಟ.

ನಾನು ಭಾರತೀಯ ಸಿನಿಮಾ ನಟ ಎಂದು ಹೇಳಿದರೂ ಅವರು ಕೇಳಲಿಲ್ಲ. ಇತರ ಅಧಿಕಾರಿಗಳು ಗುರುತು ಹಿಡಿದರೂ ಅಲ್ಲಿದ್ದ ಒಬ್ಬನೇ ಒಬ್ಬ ವಲಸೆ ಅಧಿಕಾರಿಯು ನನ್ನ ಮೇಲೆ ಕೆಂಗಣ್ಣು ಬೀರಿದ್ದ. ಯಾವುದೇ ಕರೆಗಳನ್ನು ಮಾಡಲೂ ಅವಕಾಶ ನೀಡಿರಲಿಲ್ಲ ಎಂದು ಶಾರೂಖ್ ದೂರಿದ್ದಾರೆ.

ಸುಮಾರು ಎರಡು ಗಂಟೆಗಳಷ್ಟು ಹೊತ್ತು ವಿಚಾರಣೆ ನಡೆಸಿದ ನಂತರ ಫೋನ್ ಮಾಡಲು ಅವಕಾಶ ನೀಡಿದರು. ಈ ಸಂದರ್ಭದಲ್ಲಿ ನಾನು ಸಂಸದ ರಾಜೀವ್ ಶುಕ್ಲಾ, ನನ್ನ ಆಪ್ತ ಕಾರ್ಯದರ್ಶಿ ಮತ್ತು ಮನೆಗೆ ಫೋನ್ ಮಾಡಿದೆ. ಆ ಮೇಲೆ ಶುಕ್ಲಾ ಅಮೆರಿಕಾದಲ್ಲಿನ ದೂತವಾಸ ಕಚೇರಿಯನ್ನು ಸಂಪರ್ಕಿಸಿದ್ದರು. ಅಲ್ಲಿನ ಅಧಿಕಾರಿಗಳು ಮಧ್ಯ ಪ್ರವೇಶಿಸಿದ ಮೇಲೆ ಎಲ್ಲವೂ ತಿಳಿಯಾಯಿತು ಎಂದು ಅವರು ವಿವರಿಸಿದ್ದಾರೆ.

ಶೀಘ್ರದಲ್ಲೇ ತಾನು ನನ್ನ ದೇಶ ಭಾರತಕ್ಕೆ ವಾಪಸಾಗಲಿದ್ದೇನೆ. ನನಗೆ ನನ್ನ ದೇಶಕ್ಕಿಂತ ಮಿಗಿಲಾದುದು ಯಾವುದೂ ಇಲ್ಲ. ನನ್ನ ದೇಶವೇ ಶ್ರೇಷ್ಠ. ಅಮೆರಿಕಾದಲ್ಲಿನ ಭಾರತೀಯರ ಒತ್ತಾಯಕ್ಕೆ ಮಣಿದು ಸ್ವಾತಂತ್ರ್ಯ ಸಂಭ್ರಮದಲ್ಲಿ ಪಾಲ್ಗೊಳ್ಳಲು ತೆರಳಿದ್ದೆ. ಆದರೆ ಅಮೆರಿಕಾದವರು ತಕ್ಕ ಸನ್ಮಾನ ಮಾಡಿದ್ದಾರೆ ಎಂದು ಅಲ್ಲಿನ ವ್ಯವಸ್ಥೆ ಬಗ್ಗೆ ರೇಜಿಗೆ ವ್ಯಕ್ತಪಡಿಸಿದರು.

ಅಮೆರಿಕಾ ನಿರಾಕರಣೆ..
ಬಾಲಿವುಡ್ ಸೂಪರ್‌ಸ್ಟಾರ್ ಶಾರೂಖ್ ಖಾನ್‌ರನ್ನು ವಶಕ್ಕೆ ತೆಗೆದುಕೊಂಡು ಎರಡು ಗಂಟೆಗಳ ಕಾಲ ನ್ಯೂಯಾರ್ಕ್ ವಿಮಾನ ನಿಲ್ದಾಣದಲ್ಲಿ ವಿಚಾರಣೆ ನಡೆಸಲಾಗಿದೆ ಅಥವಾ ಅವರೊಬ್ಬರನ್ನೇ ಏಷಿಯಾ ಪ್ರಜೆ ಎಂಬ ಕಾರಣಕ್ಕೆ ಈ ರೀತಿ ಮಾಡಲಾಗಿದೆ ಎಂಬ ಆರೋಪಗಳನ್ನು ಅಮೆರಿಕಾ ತಳ್ಳಿ ಹಾಕಿದೆ.

ಆರೋಪಗಳು ಸರಿಯಾದುದಲ್ಲ ಎಂದು ಅಮೆರಿಕಾದ ವಲಸೆ ಮತ್ತು ಗಡಿ ಭದ್ರತಾ ವಕ್ತಾರ ಎಲ್ಮೆರ್ ಕಮಾಚೋ ಸ್ಪಷ್ಟಪಡಿಸಿದ್ದಾರೆ.

ಶಾರೂಖ್‌ರ ಬ್ಯಾಗುಗಳು ಬಂದಿರದಿದ್ದ ಕಾರಣಕ್ಕೆ ಅವರನ್ನು ವಿಚಾರಣೆ ನಡೆಸಲಾಗಿದೆ. ಅವರ ದಾಖಲೆಗಳನ್ನು ಪರಿಶೀಲಿಸಲಾಗಿದೆ. ಅವೆಲ್ಲವೂ ಸರಿಯಾಗಿದ್ದವು ಎಂದು ಅವರು ತಿಳಿಸಿದ್ದಾರೆ.

ವಿಮಾನ ನಿಲ್ದಾಣದಲ್ಲಿನ ಸಾಮಾನ್ಯ ಪರಿಶೀಲನೆಯ ನಂತರ ಅವರನ್ನು ಒಂದು ಕೊಠಡಿಗೆ ಕರೆದೊಯ್ಯಲಾಗಿತ್ತು. ಅಲ್ಲಿ ಸರದಿಯಲ್ಲಿ ಇತರರು ಕಾಯುತ್ತಿದ್ದ ಕಾರಣ ಖಾನ್ ಗಂಟೆಗಳ ಕಾಲ ಉಳಿದುಕೊಳ್ಳಬೇಕಾಯಿತು. ಒಟ್ಟಾರೆ ಪ್ರಕರಣ ಒಂದೇ ಗಂಟೆಯಲ್ಲಿ ಅಂತ್ಯ ಕಂಡಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಒಟ್ಟಾರೆ ಪ್ರಕ್ರಿಯೆಯನ್ನು ವೃತ್ತಿಪರವಾಗಿ ಪರಿಗಣಿಸಲಾಗಿದೆಯೇ ಹೊರತು ಅವರು ಖಾನ್ ಎಂಬ ಕಾರಣಕ್ಕಾಗಿ ಅಥವಾ ಏಷಿಯಾ ಪ್ರಜೆ ಎಂಬ ಕಾರಣಕ್ಕಾಗಿ ನಡೆಸಲಾಗಿಲ್ಲ. ಪ್ರವಾಸಿಗರ ಕುರಿತು ನಿರ್ದಿಷ್ಟ ಪರಿಶೀಲನೆ ನಡೆಸುವುದು ನಮ್ಮ ನಿಯಮ. ಅದು ಯಾರೇ ಆಗಿದ್ದರೂ ಬದಲಾಗದು ಎಂದು ಅಮೆರಿಕಾ ಸ್ಪಷ್ಟಪಡಿಸಿದೆ.

ಅಮೆರಿಕಾ ವಿರುದ್ಧ ಹಲವರಿಂದ ಆಕ್ರೋಶ
ನ್ಯೂಯಾರ್ಕ್ ವಿಮಾನ ನಿಲ್ದಾಣದಲ್ಲಿ ತಪಾಸಣೆ ನೆಪದಲ್ಲಿ ಅವಮಾನಕಾರಿಯಾಗಿ ನಡೆದುಕೊಂಡ ಬಗ್ಗೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಓರ್ವ ವ್ಯಕ್ತಿಯನ್ನು ಧರ್ಮ ಅಥವಾ ಪ್ರಾಂತ್ಯವೆಂದು ವರ್ಗೀಕರಿಸಿ ವಿಚಾರಣೆ ನಡೆಸಿ ಅವಮಾನಿಸುವುದು ಅಥವಾ ಬಂಧಿಸುವುದು ಸರಿಯಾದ ಕ್ರಮವಲ್ಲ ಎಂದು ಕೇಂದ್ರ ವಾರ್ತಾ ಮತ್ತು ಪ್ರಚಾರ ಖಾತೆ ಸಚಿವೆ ಅಂಬಿಕಾ ಸೋನಿ ಕಿಡಿ ಕಾರಿದ್ದಾರೆ.

ಇಂತಹ ಅನುಭವ ಖಾನ್‌ಗೆ ಮೊದಲಲ್ಲ. ನಮಗೂ ಆಗಿದೆ. ಅಗತ್ಯಕ್ಕಿಂತ ಹೆಚ್ಚಾಗಿ ಅವರು ತಪಾಸಣೆ ಮಾಡುವ ಮೂಲಕ ಕಿರಿಕಿರಿ ಉಂಟು ಮಾಡುತ್ತಾರೆ. ಅವರಿಗೆ ಅದೇ ರೀತಿಯ ಉಪಚಾರವನ್ನು ನಾವು ಕೂಡ ಮಾಡಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.

ಆದರೆ ಈ ಪ್ರಕರಣ 'ಸಾಮಾನ್ಯ' ಎಂದು ಮತ್ತೋರ್ವ ಖ್ಯಾತ ನಟ ಸಲ್ಮಾನ್ ಖಾನ್ ಉಚ್ಛರಿಸಿದ್ದಾರೆ. ಇದಕ್ಕೆ ಹೆಚ್ಚೇನೂ ಮಹತ್ವ ನೀಡಬೇಕಾಗಿಲ್ಲ. ಆ ದೇಶದಲ್ಲಿ ಇಂತಹ ತಪಾಸಣೆ ನಡೆಸುವುದು ಸಾಮಾನ್ಯ. ಈ ಹಿಂದಿನ ಘಟನೆಗಳೇ ಅದಕ್ಕೆ ಕಾರಣ ಎಂದು ತೇಲಿಸಿ ಬಿಟ್ಟಿದ್ದಾರೆ.

ನಟಿ ಪ್ರಿಯಾಂಕಾ ಚೋಪ್ರಾ, ಕರಣ್ ಜೋಹರ್, ಫರ್ಹಾ ಖಾನ್ ಸೇರಿದಂತೆ ಭಾರತೀಯ ಸಿನಿಮಾ ರಂಗದ ಬಹುತೇಕರು ಅಮೆರಿಕಾದ ಕ್ರಮವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ