ಕುವೈತ್ ಮದುವೆ ಸಮಾರಂಭದ ಟೆಂಟ್‌ನಲ್ಲಿ ಶನಿವಾರ ರಾತ್ರಿ ಅಗ್ನಿಅನಾಹುತ ಸಂಭವಿಸಿದ್ದರಿಂದ ಕನಿಷ್ಠ 41 ಮಹಿಳೆಯರು ಮತ್ತು ಮಕ್ಕಳು ಅಸುನೀಗಿದ್ದಾರೆ ಮತ್ತು ಹತ್ತಾರು ಮಂದಿ ಗಾಯಗೊಂಡಿದ್ದಾರೆಂದು ಮಾಧ್ಯಮದ ವರದಿಗಳು ತಿಳಿಸಿವೆ.
ಜಾಹ್ರಾದ ಅಯೊನ್ ಪ್ರದೇಶದಲ್ಲಿ ನಡೆದ ವಿವಾಹದಲ್ಲಿ ಅಗ್ನಿಆಕಸ್ಮಿಕ ಸಂಭವಿಸಿದ್ದರಿಂದ ಜನರು ದಿಕ್ಕಾಪಾಲಾಗಿ ಓಡಿ ಕಾಲ್ತುಳಿತ ಸಂಭವಿಸಿದ್ದರಿಂದ ಈ ದುರಂತ ಸಂಭವಿಸಿದೆ. ಅಗ್ನಿ ಆಕಸ್ಮಿಕದಲ್ಲಿ ಕನಿಷ್ಠ 70 ಜನರು ಗಾಯಗೊಂಡಿದ್ದಾರೆಂದು ಅಲ್ ಜಜೀರಾ ವರದಿ ಮಾಡಿದೆ. ಬೆಂಕಿ ಆಕಸ್ಮಿಕಕ್ಕೆ ಕಾರಣವನ್ನು ಇನ್ನೂ ನಿರ್ಧರಿಸಬೇಕಿದ್ದು, ತನಿಖೆ ನಡೆಯುತ್ತಿದೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಕಿಯನ್ನು ನಂದಿಸಲು ಕನಿಷ್ಠ 20 ಅಗ್ನಿಶಾಮಕ ವಾಹನಗಳು ಮತ್ತು 12 ಮಂದಿ ಅಗ್ನಿಶಾಮಕ ಸಿಬ್ಬಂದಿ ಶ್ರಮಿಸಿದರೆಂದು ಮೇ. ಜನರಲ್ ಜಸಿಂ ಅಲ್ ಮನ್‌ಸೌರಿ ತಿಳಿಸಿದ್ದಾರೆ. ಡೇರೆಯಲ್ಲಿ ಕಿಕ್ಕಿರಿದು ಜನರು ತುಂಬಿದ್ದರಿಂದ ಸತ್ತವರ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಸಂಭವವಿದೆಯೆಂದು ಅವರು ಹೇಳಿದ್ದಾರೆ.