ಫ್ರಾನ್ಸ್‌ನಲ್ಲಿ ಮುಸ್ಲಿಂ ಜನಾಂಗದ ಸಚಿವೆಯೊಬ್ಬರು ಬುರ್ಖಾ ನಿಷೇಧಕ್ಕೆ ಒತ್ತಾಸೆಯಾಗಿ ನಿಂತಿದ್ದು, ಬುರ್ಖಾ ನಿಷೇಧದಿಂದ ಮೂಲಭೂತವಾದಿ ಇಸ್ಲಾಂ ಹರಡುವಿಕೆ ಮೊಟಕಿಗೆ ನೆರವಾಗುತ್ತದೆಂದು ಅವರು ವಾದಿಸಿದ್ದಾರೆ. ಮುಸ್ಲಿಂ ಸಚಿವೆಯ ಪ್ರತಿಕ್ರಿಯೆಯಿಂದ ಫ್ರಾನ್ಸ್‌ನಲ್ಲಿ ಬುರ್ಖಾ ಧರಿಸುವಿಕೆ ಕುರಿತ ವಿವಾದದ ಬೆಂಕಿಗೆ ತುಪ್ಪ ಸುರಿದಂತಾಗಿದೆ.
ಕಣ್ಣೊಂದನ್ನು ಹೊರತುಪಡಿಸಿ ಎಲ್ಲವನ್ನೂ ಮುಚ್ಚುವ ಬುರ್ಖಾ ಮಹಿಳೆಯರ ವಿರುದ್ಧ ದಮನಕಾರಿ ನೀತಿ, ಅವರ ಗುಲಾಮಗಿರಿ ಮತ್ತು ಅವಮಾನವನ್ನು ಪ್ರತಿನಿಧಿಸುತ್ತದೆಂದು ನಗರಾಭಿವೃದ್ಧಿ ಸಚಿವೆ ಫಡೇಲಾ ಅಮಾಲಾ ತಿಳಿಸಿದ್ದಾರೆ. ಅಲ್ಜೀರಿಯ ಸಂಜಾತೆಯಾದ ಅಮಾರಾ ಹೇಳಿಕೆಯಿಂದ ಬುರ್ಖಾ ವಿವಾದದ ಕಿಡಿ ಸ್ಫೋಟಿಸುವುದೆಂದು ನಿರೀಕ್ಷಿಸಲಾಗಿದೆ.
ಬುರ್ಖಾ ಗುಲಾಮಗಿರಿಯ ಸಂಕೇತ ಮತ್ತು ತಮ್ಮ ಗಣರಾಜ್ಯದಲ್ಲಿ ಅದಕ್ಕೆ ಸ್ವಾಗತವಿಲ್ಲವೆಂದು ಫ್ರಾನ್ಸ್ ಅಧ್ಯಕ್ಷ ಸರ್ಕೋಜಿ ಹೇಳಿಕೆ ನೀಡುವ ಮೂಲಕ ವಿವಾದಕ್ಕೆ ನಾಂದಿ ಹಾಡಿದ್ದರು..ಫ್ರಾನ್ಸ್ ಬೆಳಕು ನೀಡುವ ಇಸ್ಲಾಮ್ ಧರ್ಮದ ಜ್ಯೋತಿಯಾಗಿದ್ದು, ಇಸ್ಲಾಂ ಸಂದೇಶಕ್ಕೆ ಅಡ್ಡಿಯಾಗುವ ಮೂಲಭೂತವಾದಿ ಇಸ್ಲಾಂನ ಗ್ಯಾಂಗರೀನ್ ವಿರುದ್ಧ ಹೋರಾಟ ಅಗತ್ಯವೆಂದು ಅಮಾರಾ ಹೇಳಿದ್ದಾರೆ.