ಪಶ್ಚಿಮ ಇಂಡೋನೇಶಿಯದಲ್ಲಿ ಸಾಗರದ ಜಲಗರ್ಭದಲ್ಲಿ ಶಕ್ತಿಶಾಲಿ ಭೂಕಂಪ ಅಪ್ಪಳಿಸಿದ್ದು, ನಾಲ್ಕು ಜನರಿಗೆ ಗಾಯಗಳಾಗಿವೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ. ಇಂಡೊನೇಶಿಯದ ಹವಾಮಾನ ಮತ್ತು ಭೂಬೌಗೋಳಿಕ ಏಜೆನ್ಸಿಯು ಯಾವುದೇ ಸುನಾಮಿ ಮುನ್ನೆಚ್ಚರಿಕೆಯನ್ನು ನೀಡಿಲ್ಲ.
ಭೂಕಂಪದ ತೀವ್ರತೆಯು 6.7ರಷ್ಟಿದ್ದು, ಆರಂಭದಲ್ಲಿ ಅದರ ತೀವ್ರತೆ 7ರಷ್ಟಿತ್ತು. ಮಧ್ಯಾಹ್ನ 2.38ಕ್ಕೆ ಭೂಕಂಪ ಅಪ್ಪಳಿಸಿದ್ದು, ಸುಮಾತ್ರ ದ್ವೀಪದಲ್ಲಿ ಪಡಾಂಗ್ ನಗರದ ನೈರುತ್ಯಕ್ಕೆ 70 ಮೈಲು ದೂರದಲ್ಲಿ ಮತ್ತು ಹಿಂದುಮಹಾ ಸಾಗರದ 28 ಮೈಲು ಆಳದಲ್ಲಿ ಇದರ ಕೇಂದ್ರಬಿಂದುವಿತ್ತು.
ಇಂಡೋನೇಶಿಯ ಪೆಸಿಫಿಕ್ ರಿಂಗ್ ಆಫ್ ಫೈರ್ ಎಂದೇ ಹೆಸರಾದ ಅಗ್ನಿಪರ್ವತಗಳಿಂದ ಮತ್ತು ಭೂಪದರಗಳ ಸರಣಿ ಸೇರುವ ಜಾಗದಲ್ಲಿದ್ದು ಭೂಕಂಪದಿಂದ ಸುಲಭವಾಗಿ ಪೀಡಿತವಾಗಿದೆ. ಇಂಡೊನೇಶಿಯದಲ್ಲಿ 2004ರಲ್ಲಿ ಸಂಭವಿಸಿದ ಭೀಕರ ಭೂಕಂಪದಿಂದ ಸುನಾಮಿಯ ರಾಕ್ಷಸ ಅಲೆಗಳೆದ್ದು, 230,000 ಜನರು ಅಸುನೀಗಿದ್ದರು.