ಸೌದಿ ಆರೋಗ್ಯಅಧಿಕಾರಿಗಳು ಭಾರತೀಯ ವಲಸೆಗಾರರೊಬ್ಬರು ಸೇರಿದಂತೆ ಹಂದಿ ಜ್ವರದ ಸೋಂಕಿನಿಂದ ಮೂವರು ಸತ್ತಿರುವುದನ್ನು ಪ್ರಕಟಿಸಿದ್ದು, ರಾಷ್ಟ್ರದಲ್ಲಿ ಹಂದಿಜ್ವರದಿಂದ ಸತ್ತವರ ಸಂಖ್ಯೆ 14ಕ್ಕೇರಿದೆ. 28 ವರ್ಷ ವಯಸ್ಸಿನ ಸೌದಿ ಮಹಿಳೆ, 11ರ ಪ್ರಾಯದ ಸೌದಿ ಬಾಲಕಿ ಇಬ್ಬರೂ ಶುಕ್ರವಾರ ಮೃತಪಟ್ಟಿದ್ದು, ಭಾರತೀಯ ವಲಸೆಗಾರ ಗುರುವಾರ ನಿಧನರಾಗಿದ್ದಾರೆಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಎಚ್1ಎನ್1 ಜ್ವರದ ವೈರಸ್ ಹರಡುವಿಕೆ ನಿಧಾನವಾಗಿದ್ದು, ಮರಣದ ಪ್ರಮಾಣ ಕಡಿಮೆಯಿದೆ. ಅಧಿಕೃತ ಸೋಂಕಿನ ಅಂಕಿಅಂಶಗಳಲ್ಲಿ ಸುಮಾರು 700 ಜನರು ಹಂದಿಜ್ವರದ ಸೋಂಕಿಗೆ ಒಳಗಾಗಿದ್ದಾರೆಂದು ತಿಳಿಸಿದೆ.
ರಮ್ಜಾನ್ ಪವಿತ್ರ ತಿಂಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ನೂರಾರು, ಸಾವಿರಾರು ವಿದೇಶಿ ಮುಸ್ಲಿಮರು ಮೆಕ್ಕಾಗೆ ಉಮ್ರಾ ಯಾತ್ರೆಯನ್ನು ಕೈಗೊಳ್ಳುವ ಕಾರಣ ಸೌದಿ ಅರೇಬಿಯ ಹಂದಿಜ್ವರ ಪೀಡಿತರ ಸಮೀಕ್ಷೆ ಮತ್ತು ಚಿಕಿತ್ಸೆ ಚಟುವಟಿಕೆಗಳನ್ನು ಚುರುಕುಗೊಳಿಸಿದೆ. ಆದರೆ ಹಂದಿಜ್ವರದ ಭೀತಿಯಿಂದ ಮೆಕ್ಕಾ ಪ್ರದೇಶದ ಹೊಟೆಲ್‌ಗಳಲ್ಲಿ ಕಾದಿರಿಸುವಿಕೆಗಳು ದೊಡ್ಡ ಮಟ್ಟದಲ್ಲಿ ರದ್ದಾಗುತ್ತಿದೆ.