ಆಫ್ಘಾನಿಸ್ತಾನದ ಮತಗಟ್ಟೆಗಳ ಮೇಲೆ ದಾಳಿ ಮಾಡುವುದಾಗಿ ತಾಲಿಬಾನ್ ಭಾನುವಾರ ಪ್ರಥಮಬಾರಿಗೆ ಬೆದರಿಕೆ ಹಾಕುವ ಮೂಲಕ ಕಾಬೂಲ್ ಹೃದಯಭಾಗದಲ್ಲಿ ನ್ಯಾಟೊ ಪಡೆ ಮೇಲೆ ದಾಳಿ ಮಾಡಿದ ಬಳಿಕ ಈ ವಾರದ ಚುನಾವಣೆ ಹಳಿತಪ್ಪಿಸುವ ಪ್ರಯತ್ನವನ್ನು ತೀವ್ರಗೊಳಿಸಿದೆ. ದಕ್ಷಿಣ ಕಂದಹಾರ್‌ನಲ್ಲಿ ಕರಪತ್ರಗಳನ್ನು ಉದುರಿಸುವ ಮೂಲಕ ಈ ಬೆದರಿಕೆ ಹಾಕಲಾಗಿದ್ದು, ಕರಪತ್ರಗಳಲ್ಲಿ ತಾಲಿಬಾನ್ ವಕ್ತಾರನ ದೃಢೀಕರಣವಿದೆ.
ಚುನಾವಣೆ ಹಿನ್ನೆಲೆಯಲ್ಲಿ ತಾಲಿಬಾನ್ ಉಗ್ರರ ಪಡೆಯು ಹಿಂಸಾಕಾಂಡದ ರಕ್ತಸಿಕ್ತ ಆಂದೋಳನವನ್ನು ತೀವ್ರಗೊಳಿಸಲಿದೆಯೆಂದು ಕರಪತ್ರದಲ್ಲಿ ಅವನು ತಿಳಿಸಿದ್ದಾನೆ. 'ಗೌರವಾನ್ವಿತ ನಿವಾಸಿಗಳಿಗೆ ನಮ್ಮ ಮನವಿಯೇನೆಂದರೆ ನೀವು ಚುನಾವಣೆಯಲ್ಲಿ ಭಾಗಿಯಾಗಿ ನಮ್ಮ ಕಾರ್ಯಾಚರಣೆಗೆ ಬಲಿಪಶುವಾಗಬೇಡಿ. ಏಕೆಂದರೆ ನಾವು ಹೊಸ ತಂತ್ರವನ್ನು ಬಳಸುತ್ತೇವೆ' ಎಂದು ಕಂದಬಾರ್‌ನಲ್ಲಿ ವಿತರಿಸಿರುವ ಒಂದು ಕರಪತ್ರದಲ್ಲಿ ತಿಳಿಸಲಾಗಿದೆ.
'ಮತಕೇಂದ್ರಗಳಿಗೆ ನಿಮ್ಮ ಆಸ್ತಿಯನ್ನು ಬಾಡಿಗೆ ಕೊಡಬೇಡಿ, ಹಾಗೆ ಕೊಟ್ಟರೆ ಚುನಾವಣೆ ಬಳಿಕವೂ ಅವರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆಂದು' ಕರಪತ್ರದಲ್ಲಿ ಬೆದರಿಕೆ ಹಾಕಲಾಗಿದೆ. ತಾಲಿಬಾನ್ ವಕ್ತಾರ ಖಾರಿ ಯುಸುಫ್ ಅಹ್ಮದಿ, ಈ ಕರಪತ್ರಗಳು ಅಸಲಿಯಾಗಿದ್ದು, ತಾಲಿಬಾನ್ ಕಮಾಂಡರ್‌ಗಳು ಜನಸಮೂಹಕ್ಕೆ ಚುನಾವಣೆ ಬಹಿಷ್ಕರಿಸುವಂತೆ ಕರೆ ನೀಡಿದೆ. ಮತಕೇಂದ್ರಗಳ ಮೇಲೆ ಬಂಡುಕೋರರಿಂದ ದಾಳಿಯ ನೇರಬೆದರಿಕೆಯು ಇದೇ ಮೊದಲೆಂದು ಹೇಳಲಾಗಿದೆ.