ಪ್ಯೋಂಗ್ಯಾಂಗ್, ಸೋಮವಾರ, 17 ಆಗಸ್ಟ್ 2009( 11:44 IST )
ಅಮೆರಿಕ ಮತ್ತು ದಕ್ಷಿಣ ಕೊರಿಯ ಪಡೆಗಳು ಜಂಟಿ ಸಮರಾಭ್ಯಾಸ ಆರಂಭಿಸಿರುವ ಹಿನ್ನೆಲೆಯಲ್ಲಿ ಉತ್ತರ ಕೊರಿಯ ತನ್ನ ಸೇನೆ ಮತ್ತು ಜನರಿಗೆ ವಿಶೇಷ ಕಟ್ಟೆಚ್ಚರ ವಹಿಸುವಂತೆ ಸೋಮವಾರ ಆದೇಶಿಸಿದೆ. ಯಾವುದೇ ಮಿಲಿಟರಿ ಪ್ರಚೋದನೆಗೆ ಅಣ್ವಸ್ತ್ರ ದಾಳಿಯ ಪ್ರತಿಕ್ರಿಯೆ ನೀಡುವುದಾಗಿ ಅದು ಎಚ್ಚರಿಸಿದೆ.
ಪ್ರತ್ಯೇಕಗೊಂಡ ಕುಟುಂಬಗಳ ಪುನರ್ಮಿಲನ ಮತ್ತು ಜಂಟಿ ಪ್ರವಾಸೋದ್ಯಮ ಆಯೋಜನೆಗೆ ದಕ್ಷಿಣ ಕೊರಿಯ ಜತೆ ಮರುಸಂಧಾನ ಯೋಜನೆಗಳನ್ನು ಆರಂಭಿಸುವುದಾಗಿ ಉತ್ತರ ಕೊರಿಯ ಹೇಳಿದ ದಿನದಂದೇ ಕಮ್ಯುನಿಸ್ಟ್ ರಾಷ್ಟ್ರದ ಸೇನೆ ಪ್ರಕಟಣೆ ನೀಡಿದೆ. ದಕ್ಷಿಣ ಕೊರಿಯ ಮತ್ತು ಅಮೆರಿಕದ ಮಿಲಿಟರಿಗಳು ವಾರ್ಷಿಕ ಕಂಪ್ಯೂಟರ್ ಆಧಾರಿತ ಸಮರಾಭ್ಯಾಸ ಯೋಜಿಸಿರುವ ಹಿನ್ನೆಲೆಯಲ್ಲಿ ಸೋಮವಾರದಿಂದ ತಮ್ಮ ಪಡೆ ವಿಶೇಷ ಕಟ್ಟೆಚ್ಚರ ವಹಿಸುತ್ತದೆಂದು ಉತ್ತರ ಕೊರಿಯ ಸೇನೆ ತಿಳಿಸಿದೆ.
ದಕ್ಷಿಣ ಕೊರಿಯ ಮತ್ತು ಅಮೆರಿಕ ಕಿಂಚಿತ್ ಮಿಲಿಟರಿ ಪ್ರಚೋದನೆ ನೀಡಿದರೂ ಕೂಡ ಉತ್ತರಕೊರಿಯ ನಿರ್ದಯವಾಗಿ ಪ್ರತಿದಾಳಿ ನಡೆಸುವುದು ಎಂದು ಕೊರಿಯ ಸುದ್ದಿಏಜೆನ್ಸಿಯ ಹೇಳಿಕೆ ತಿಳಿಸಿದೆ.