ಪಾಕಿಸ್ತಾನದ ವಾಯವ್ಯ ಪ್ರಾಂತ್ಯದ ಚರ್‌ಸಾಡ್ಡಾ ಜಿಲ್ಲೆಯಲ್ಲಿ ಕಾರ್ ಬಾಂಬ್ ಸ್ಫೋಟವುಂಟಾಗಿ ಕನಿಷ್ಠ 10 ಜನರು ಅಸುನೀಗಿದ್ದಾರೆ. ಚರ್‌ಸಾಡ್ಡಾ ಜಿಲ್ಲೆಯ ಶಬ್‌ಖಾದಾರ್ ಪ್ರದೇಶದಲ್ಲಿನ ಪೆಟ್ರೋಲ್ ಪಂಪ್ ಬಳಿ ನಿಲ್ಲಿಸಿದ್ದ ಕಾರಿನಲ್ಲಿ ಬಾಂಬನ್ನು ಹುದುಗಿಸಿಡಲಾಗಿತ್ತೆಂದು ವರದಿಗಳು ತಿಳಿಸಿವೆ. ಸ್ಫೋಟದಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 12 ಜನರು ಗಾಯಗೊಂಡಿದ್ದು, ಗಾಯಾಳುಗಳನ್ನು ಪೇಶಾವರದ ಆಸ್ಪತ್ರೆಗೆ ಸೇರಿಸಲಾಗಿದೆ.
ಸತ್ತವರಲ್ಲಿ ಇಬ್ಬರು ಮಹಿಳೆಯರು ಮತ್ತು ಇಬ್ಬರು ಮಕ್ಕಳು ಸೇರಿದ್ದು, ಸ್ಫೋಟಕ್ಕೆ ಪ್ರೇರಣೆಯೇನೆಂದು ಪೊಲೀಸರು ತನಿಖೆ ನಡೆಸುತ್ತಿರುವುದಾಗಿ ಜಿಲ್ಲಾ ಪೊಲೀಸ್ ಮುಖ್ಯಸ್ಥ ಮೊಹಮದ್ ರಿಯಾಜ್ ಖಾನ್ ತಿಳಿಸಿದ್ದಾರೆ.ಚರಸಾಡ್ಡಾ ಜಿಲ್ಲೆಯು ಮೊಹಮದ್ ಬುಡಕಟ್ಟು ಪ್ರದೇಶದ ಗಡಿಯಲ್ಲಿದ್ದು, ಸರ್ಕಾರಕ್ಕೆ ಅದರ ಮೇಲಿನ ಹಿಡಿತ ತಪ್ಪಿಹೋಗಿದ್ದು, ತಾಲಿಬಾನ್ ಉಗ್ರಗಾಮಿಗಳು ಅಲ್ಲಿ ಸಕ್ರಿಯರಾಗಿದ್ದಾರೆ.
ಪಾಕಿಸ್ತಾನ ಮಿಲಿಟರಿಯು ವಾಯವ್ಯ ಪ್ರದೇಶದಲ್ಲಿ ತಾಲಿಬಾನ್ ಉಗ್ರಗಾಮಿಗಳ ವಿರುದ್ಧ ಸರಣಿ ದಾಳಿಗಳನ್ನು ಆರಂಭಿಸಿದ್ದು, ತಾಲಿಬಾನ್ ಪ್ರತೀಕಾರದ ದಾಳಿಗಳನ್ನು ನಡೆಸುತ್ತಿದೆ.