ರಷ್ಯಾದ ಪ್ರಕ್ಷುಬ್ಧ ಉತ್ತರ ಕಕಾಸಸ್ ಪ್ರದೇಶದ ಬಳಿಯ ಪೊಲೀಸ್ ಠಾಣೆಯಲ್ಲಿ ಆತ್ಮಾಹುತಿ ಬಾಂಬರ್ ಟ್ರಕ್ಕೊಂದನ್ನು ಸ್ಫೋಟಿಸಿದ್ದು, ಕನಿಷ್ಠ 18 ಜನರು ಸತ್ತಿದ್ದಾರೆ ಮತ್ತು 60 ಮಂದಿ ಗಾಯಗೊಂಡಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸ್ ಅಧಿಕಾರಿಗಳು ಬೆಳಗಿನ ತಪಾಸಣೆಗೆ ಸಾಲಿನಲ್ಲಿ ನಿಂತಿದ್ದಾಗ, ಇಂಗುಸ್ತೇಶಿಯದ ನಜ್ರಾನ್ ನಗರದ ಸ್ಥಳೀಯ ಪೊಲೀಸ್ ಮುಖ್ಯಕಚೇರಿಯ ಗೇಟಿಗೆ ದಾಳಿಕೋರ ಟ್ರಕ್ಕನ್ನು ಡಿಕ್ಕಿಹೊಡೆಸಿ ಸ್ಫೋಟಕಗಳನ್ನು ಸಿಡಿಸಿದನೆಂದು ವಕ್ತಾರ ಕಲೋಯಿ ಅಖಿಲ್‌ಗೋವ್ ತಿಳಿಸಿದ್ದಾರೆ.
ಸುಮಾರು 20 ಕೇಜಿ ಸ್ಫೋಟಕಗಳನ್ನು ಒಯ್ಯುತ್ತಿದ್ದ ಟ್ರಕ್ಕು ಸಂಪೂರ್ಣ ಪುಡಿಯಾಗಿದೆ. ಪೊಲೀಸ್ ಕಟ್ಟಡಕ್ಕೆ ಕೂಡ ಬೆಂಕಿ ತಗುಲಿದ್ದು, ಸಮೀಪದ ವಸತಿ ಕಟ್ಟಡಗಳಿಗೆ ಕೂಡ ತೀವ್ರ ಹಾನಿಯಾಗಿದೆ. ಚೆಚನ್ಯವನ್ನು 1994ರಿಂದೀಚೆಗೆ ತಲ್ಲಣಿಸಿದ ಎರಡು ಯುದ್ಧಗಳು ಮುಕ್ತಾಯವಾಗಿದ್ದರೂ, ಉಗ್ರಗಾಮಿಗಳು ದಾಳಿ ಮಾಡಿ ತಪ್ಪಿಸಿಕೊಳ್ಳುವ ಪ್ರಕ್ರಿಯೆಯನ್ನು ಮುಂದುವರಿಸಿದ್ದಾರೆ. ಇತ್ತೀಚಿನ ತಿಂಗಳುಗಳಲ್ಲಿ ರಕ್ತಪಾತ ತೀವ್ರಗೊಂಡಿದ್ದು, ಚೆಚನ್ಯದ ನೆರೆಹೊರೆಯಲ್ಲೂ ರಕ್ತಚೆಲ್ಲುತ್ತಿದೆ.