ಸ್ವದೇಶದಲ್ಲಿ ಉಗ್ರಗಾಮಿಗಳು ಬ್ರಿಟನ್‌ನಲ್ಲಿ ದಾಳಿಗಳನ್ನು ನಡೆಸಲು ಪಿತೂರಿ ನಡೆಸಿದ್ದಾರೆಂದು ಅಲ್ ಖಾಯಿದಾ ಜತೆ ನಂಟು ಹೊಂದಿರುವ ಉಗ್ರಗಾಮಿಗಳು ಹೇಳಿದ್ದಾರೆ. ಅಲ್ ಖಾಯಿದಾ ಭಯೋತ್ಪಾದಕರು ಬ್ರಿಟನ್ ಮತ್ತು ಯುರೋಪನ್ನು ಅಮೆರಿಕಕ್ಕಿಂತ ದೊಡ್ಡ ಶತ್ರುಗಳೆಂದು ಇಂಟರ್‌ನೆಟ್ ಮ್ಯಾಗಜಿನ್‌ನಲ್ಲಿ ಬಿಂಬಿಸಿದ್ದಾರೆಂದು ವರದಿಗಳು ತಿಳಿಸಿವೆ.
ಹಿಂಸೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಬ್ರಿಟನ್‌ನಿಂದ ಗಡೀಪಾರಾದ ಉಗ್ರಗಾಮಿ ಧರ್ಮಗುರು ಅಬ್ದುಲ್ಲಾ ಅಲ್ ಫೈಸಾಲ್ ಬೆಂಬಲಿಗರಿಂದ ವೆಬ್‌ಸೈಟ್ ರಚನೆಯಾಗಿದ್ದು, ಅದರಲ್ಲಿ ಭಯಾನಕ ದಾಳಿಗಳ ಬಗ್ಗೆ ಎಚ್ಚರಿಕೆ ನೀಡಲಾಗಿದೆಯೆಂದು ಸನ್ ಸೋಮವಾರ ವರದಿ ಮಾಡಿದೆ. ಬ್ರಿಟನ್‌ನಲ್ಲಿ ವಾಸಿಸುತ್ತಿರುವ ಭಯೋತ್ಪಾದಕರು ಇತರೆ ವಿದೇಶಿಯರ ಜತೆ ಕೈಜೋಡಿಸಿ ದಾಳಿಗಳನ್ನು ಯೋಜಿಸಿದ್ದಾರೆಂದು ಬ್ರಿಟನ್ ನಿಯತಕಾಲಿಕೆ ತಿಳಿಸಿದೆ.
ಅಲ್ ಖಾಯಿದಾ ಸ್ವದೇಶಿ ಭಯೋತ್ಪಾದನೆಗೆ ಸ್ಫೂರ್ತಿ ನೀಡುತ್ತಿದ್ದು, ಬ್ರಿಟನ್‌ಗೆ ನಂ.1 ಸವಾಲೆಂದು ಬ್ರಿಟನ್ ಭದ್ರತಾ ತಜ್ಞರು ಮತ್ತೆ ಮತ್ತೆ ಎಚ್ಚರಿಸಿದ್ದಾರೆ. ಸ್ವದೇಶದಲ್ಲೇ ಬೆಳೆದ ಭಯೋತ್ಪಾದನೆ ಕುರಿತ ತಜ್ಞರೊಬ್ಬರಿಗೆ ಉನ್ನತ ಭದ್ರತಾ ಸಮಿತಿಯಲ್ಲಿ ಸ್ಥಾನನೀಡುವ ಮೂಲಕ ಜಂಟಿ ಗುಪ್ತಚರ ಸಮಿತಿಯನ್ನು ಸುಧಾರಿಸಲು ಇತ್ತೀಚಿನ ವರದಿ ಕರೆ ನೀಡಿದೆ. ಬ್ರಿಟನ್‌ನಲ್ಲಿ ಸಂಭವಿಸುವ ಬಹುತೇಕ ಭಯೋತ್ಪಾದನೆ ಸಂಚುಗಳು ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನದ ಜತೆ ನಂಟು ಹೊಂದಿವೆಂದು ಪ್ರಧಾನಮಂತ್ರಿ ಗೋರ್ಡನ್ ಬ್ರೌನ್ ಪ್ರತಿಪಾದಿಸಿದ್ದಾರೆ.