ನಿಗೂಢವಾಗಿ ಕಣ್ಮರೆಯಾಗಿದ್ದ ಸರಕುಸಾಗಣೆ ಹಡಗೊಂದನ್ನು ಪತ್ತೆಹಚ್ಚಲಾಗಿದ್ದು, ಅದರ ಸಿಬ್ಬಂದಿಯನ್ನು ರಷ್ಯಾ ಮಿಲಿಟರಿ ನೌಕೆಗೆ ವರ್ಗಾಯಿಸಲಾಗಿದೆಯೆಂದು ರಕ್ಷಣಾ ಸಚಿವ ಅನಾಟಲಿ ಸರ್ಡಿಯುಕೊವ್ ಸೋಮವಾರ ತಿಳಿಸಿದ್ದಾರೆ. ಆರ್ಕ್‌ಟಿಕ್ ಸೀ ಹಡಗನ್ನು ಸೋಮವಾರ 2.30 ಭಾರತೀಯ ಕಾಲಮಾನಕ್ಕೆ ಅಟ್ಲಾಂಟಿಕ್ ಸಾಗರದಲ್ಲಿ ಪತ್ತೆಹಚ್ಚಲಾಯಿತು.
ಕಳೆದ 10 ದಿನಗಳಿಂದ ರಷ್ಯಾ ಮತ್ತು ನ್ಯಾಟೊ ಹಡಗುಗಳು ತೀವ್ರ ಶೋಧ ಪ್ರಯತ್ನಗಳನ್ನು ನಡೆಸಿದ ಬಳಿಕ ಹಡಗು ಪತ್ತೆಯಾಯಿತೆಂದು ಸರ್ಡುಕೊವ್ ತಿಳಿಸಿದ್ದಾರೆ. ಸಬ್‌ಮೆರಿನ್ ನಿಗ್ರಹ ಹಡಗಿಗೆ ಸಿಬ್ಬಂದಿಯನ್ನು ವರ್ಗಾಯಿಸಲಾಗಿದೆಯೆಂದು ಸರ್ಡುಕೋವ್ ಅಧ್ಯಕ್ಷ ಮೆಡ್ವೆಡೆವ್ ಅವರ ಜತೆ ಭೇಟಿಯಲ್ಲಿ ತಿಳಿಸಿದ್ದಾರೆ.
ಆದರೆ ಹಡಗು ಪ್ರಸಕ್ತ ಇರುವ ಸ್ಥಳದ ಬಗ್ಗೆ ಸರ್ಡುಕೋವ್ ಯಾವುದೇ ಪ್ರಸ್ತಾಪ ಮಾಡಿಲ್ಲ ಮತ್ತು ಅಪಹರಿಸಲಾಗಿದೆಯೆಂದು ಶಂಕಿಸಲಾದ ರಷ್ಯಾ ಸರಕುಸಾಗಣೆ ಹಡಗು ಕಾಣೆಯಾಗಲು ಕಾರಣವೇನೆಂಬ ನಿಗೂಢತೆ ಕುರಿತು ಅವರ ಪ್ರಕಟಣೆಯಲ್ಲಿ ಯಾವುದೇ ಸ್ಪಷ್ಟನೆ ಇರಲಿಲ್ಲವೆಂದು ಹೇಳಲಾಗಿದೆ.ಮುಂದಿನ ಗಂಟೆಗಳಲ್ಲಿ ಹಡಗು ಕಣ್ಮರೆಯಾದ ಘಟನೆ, ಅದು ಸಂಪರ್ಕ ಕಳೆದುಕೊಂಡಿದ್ದೇಕೆಂಬ ಬಗ್ಗೆ ತಾವು ವಿವರಣೆ ನೀಡುವುದಾಗಿ ಅವರು ಹೇಳಿದ್ದಾರೆ.ಆರ್ಕ್‌ಟಿಕ್ ಸೀ ಹಡಗಿನ ನಿಗೂಢತೆ ಕುರಿತು ಪೂರ್ಣ ತನಿಖೆಗೆ ಮೆಡ್ವೆಡೆವ್ ಕರೆ ನೀಡಿದ್ದು, ಎಲ್ಲ ಆಸಕ್ತರಿಗೆ ಈ ಕುರಿತು ಮಾಹಿತಿ ನೀಡುವುದಾಗಿ ಶಪಥ ತೊಟ್ಟಿದ್ದಾರೆ.